ಗಂಗಾವತಿ ಸಿಬಿಎಸ್ ವೃತ್ತದಲ್ಲಿ ನಗರಸಭೆ ಕೈಗೆತ್ತಿಕೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ರಸ್ತೆಯಲ್ಲೇ ಉಳಿದಿದ್ದ ಕಟ್ಟಡ ತ್ಯಾಜ್ಯವನ್ನು ಬುಧವಾರ ತೆರವುಗೊಳಿಸಲಾಯಿತು. 
ಕೊಪ್ಪಳ

ರಸ್ತೆಯಲ್ಲೇ ಉಳಿದಿದ್ದ ಕಟ್ಟಡ ತ್ಯಾಜ್ಯ ತೆರವು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿ ನಗರಸಭೆಯಿಂದ ಕಾರ್ಯಾಚರಣೆ
ಗಂಗಾವತಿ: ುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ರಸ್ತೆಯಲ್ಲೇ ಉಳಿದಿದ್ದ ತ್ಯಾಜ್ಯ ತೆರವಿಗೆ ನಗರಸಭೆ ಮುಂದಾಗಿದ್ದು, ಕೆಲವೆಡೆ ಸ್ವಯಂ ಪ್ರೇರಿತ ತೆರವಿಗೆ ವ್ಯಾಪಾರಿಗಳೇ ಮುಂದಾಗಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿರುವ ುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ನಗರಸಭೆಯ ತೆರವು ಕಾರ್ಯಾಚರಣೆ ಶಾಕ್ ನೀಡಿದ್ದು, ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಸಿದ್ಧರಿಲ್ಲ. ಆದರೆ ರಸ್ತೆ ಬದಿಯಲ್ಲಿದ್ದ ಬಂಡಿಗಳನ್ನು ನಗರದ ಗುಂಡಮ್ಮಕ್ಯಾಂಪ್ ಸಿಟಿ ಮಾರುಕಟ್ಟೆಗೆ ಸ್ಥಳಾಂತರಿಸಿದ್ದು, ವಹಿವಾಟು ಚೇತರಿಸಿಕೊಳ್ಳುತ್ತಿದೆ.
ುಟ್‌ಪಾತ್ ಮೇಲಿದ್ದ ಟೆಂಟ್, ಮೆಟ್ಟಿಲು ಮತ್ತು ಆಸರೆ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಕಟ್ಟಡ ತ್ಯಾಜ್ಯವನ್ನು ರಸ್ತೆಯಲ್ಲಿಳಿಸಲಾಗಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾದ ಬಗ್ಗೆ ವಿಜಯವಾಣಿಯಲ್ಲಿ ಮೇ 6ರಂದು ನಿರ್ದಿಷ್ಟ ಗುರಿ ಇಲ್ಲದೆ ಒತ್ತುವರಿ ತೆರವು ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ಬೆಳಗಿನ ಜಾವದಿಂದಲೇ ಜೆಸಿಬಿ, ಟಿಪ್ಪರ್ ಮೂಲಕ ತ್ಯಾಜ್ಯ ತೆರವು ಆಪರೇಷನ್ ಕೈಗೆತ್ತಿಕೊಂಡಿದ್ದು, ಬಹುತೇಕ ರಸ್ತೆಯಲ್ಲಿ ತೆರವುಗೊಳಿಸಲಾಗಿದೆ. ಶುಚಿತ್ವ ಕಾಪಾಡದೇ, ಶುದ್ಧ ನೀರೂ ಇಡದೆ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ನೀರಿನ ಅರವಟಿಗೆಗಳನ್ನು ತೆರವುಗೊಳಿಸದೆ ಕೈಬಿಟ್ಟಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ವರ್ಷದಿಂದ ರಸ್ತೆಯಲ್ಲೇ ಉಳಿದುಕೊಂಡ ಸಿಬಿಎಸ್ ವೃತ್ತ ಬಳಿಯ ನೀರಿನ ಅರವಟಿಗೆ ಉಳಿಸಲು ಪ್ರಭಾವಿಗಳೊಬ್ಬರು ನಗರಸಭೆ ಸಿಬ್ಬಂದಿ ಮೇಲೆ ಪ್ರಭಾವ ಬೀರಿದ್ದರಿಂದ ತೆರವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೇ ಉತ್ತರ ನೀಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಮಾರ್ಗ ವಿಸ್ತರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

ಜುಲಾಯಿನಗರ ಇಂದಿರಾಗಾಂಧಿ ವೃತ್ತದಿಂದ ಶ್ರೀನೀಲಕಂಠೇಶ್ವರ ವೃತ್ತದವರೆಗಿನ ರಸ್ತೆ ಒತ್ತುವರಿ ಕಟ್ಟಡಗಳ ತೆರವಿಗೆ ನಗರಸಭೆ ಮುಂದಾಗಿದ್ದು, 80 ಅಡಿ ರಸ್ತೆ ನಿಗದಿಪಡಿಸಲಾಗಿದೆ. ಕೆಕೆಆರ್‌ಡಿಬಿ ರಸ್ತೆ ಮತ್ತು ವಿದ್ಯುತ್ ದೀಪದ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರಾಗಿದ್ದು, ರಸ್ತೆ ವಿಸ್ತರಣೆಯಿಂದ 2ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇತ್ತೀಚಿಗೆ ಕೆಲವರು ವಿಸ್ತರಣೆ ವಿರೋಧಿಸಿ ಕೋರ್ಟ್‌ಮೆಟ್ಟಿಲೇರಿದ್ದರಿಂದ ಮತ್ತಷ್ಟು ವಿಳಂಬವಾಗಿತ್ತು. ವಿಸ್ತರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಅಳತೆ ಮಾಡಲಾಗಿದ್ದು, ಸ್ವಯಂಪ್ರೇರಿತ ತೆರವಿಗೆ ಕಟ್ಟಡ ಮಾಲೀಕರಿಗೆ ಗಡವು ನೀಡಲಾಗಿದೆ. ಸ್ಪಂದಿಸದಿದ್ದರೆ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳುವ ನಿರ್ಧಾರ ನಗರಸಭೆ ತೆಗೆದುಕೊಂಡಿದೆ. ಈ ಬಗ್ಗೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ರಸ್ತೆ ಅಭಿವೃದ್ಧಿಗೆ ವಿಸ್ತರಣೆ ಅನಿವಾರ್ಯವಾಗಿದ್ದು, ಜುಲಾಯಿನಗರದಿಂದ ಶ್ರೀನೀಲಕಂಠೇಶ್ವರ ವೃತ್ತದವರೆಗಿನ ರಸ್ತೆ ಒತ್ತುವರಿ ಕಟ್ಟಡ ತೆರವುಗೊಳಿಸಲಾಗುವುದು ಎಂದರು.