ಚಿಕ್ಕಜಂತಕಲ್‌ನಲ್ಲಿ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ ಕಾಂಬ್ಳೆ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಮನೆ ಮನೆಗೆ ತೆರಳಿ ವೈಯಕ್ತಿಕ ಶೌಚಗೃಹ ನಿರ್ಮಾಣದ ಬಗ್ಗೆ ಅರಿವು ಮೂಡಿಸಿತು. ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಪಿಡಿಒ ರವೀಂದ್ರ ಕುಲಕರ್ಣಿ ಇತರರಿದ್ದರು. 
ಕೊಪ್ಪಳ

ಶೌಚಗೃಹ ನಿರ್ಮಾಣಕ್ಕೆ ವಾರದ ಗಡುವು

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ವಾರದೊಳಗೆ ಎಲ್ಲ ಲಾನುಭವಿಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಬೇಕಿದ್ದು, ನಿರ್ಲಕ್ಷ್ಯವಹಿಸದಂತೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ ಕಾಂಬ್ಳೆ ಹೇಳಿದರು.
ತಾಲೂಕಿನ ಚಿಕ್ಕಜಂತಕಲ್ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಗ್ರಾಮದ ಅಂಬೇಡ್ಕರ್ ನಗರದಲ್ಲಿ ಶೌಚಗೃಹ ಸಮಸ್ಯೆ ಎದುರಾಗಿದ್ದು, 52 ಕುಟುಂಬಗಳಿಗೆ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಆದೇಶ ಪ್ರತಿ ನೀಡಲಾಗಿತ್ತು. ಇದುವರೆಗೆ 35 ಜನ ಲಾನುಭವಿಗಳು ನಿರ್ಮಿಸಿಕೊಂಡಿದ್ದು, ಉಳಿದ 17 ಕುಟುಂಬಗಳು ನಿರ್ಮಿಸಿಕೊಂಡಿಲ್ಲ. ದಾಖಲೆ ಸಲ್ಲಿಸದವರು ಕೂಡಲೇ ಸಲ್ಲಿಸಬೇಕಿದ್ದು, ವಾರದೊಳಗೆ ನಿರ್ಮಾಣ ಪೂರ್ಣಗೊಳ್ಳಬೇಕು. ಎಸ್‌ಸಿ, ಎಸ್‌ಟಿಗೆ 20 ಸಾವಿರ ರೂ. ಸಹಾಯಧನವಿದ್ದು, ಮೊದಲ ಹಂತದಲ್ಲಿ 12 ಸಾವಿರ ಹಾಗೂ ಎರಡನೇ ಹಂತದಲ್ಲಿ 8 ಸಾವಿರ ನೀಡಲಾಗುವುದು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ವೈಯಕ್ತಿಕ ಶೌಚಗೃಹ ಪೂರಕ ಎಂದರು.
ಮನೆ ಮನೆ ಭೇಟಿ
ಮನೆ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವೈಯಕ್ತಿಕ ಶೌಚಗೃಹ ಅಗತ್ಯತೆ ಮತ್ತು ಅದರ ಮಹತ್ವ ಕುರಿತು ಮಾಹಿತಿ ನೀಡಿತು. ಕೆಲ ಕುಟುಂಬಗಳನ್ನು ಮನವೊಲಿಸಿ, ಕಾಮಗಾರಿ ಆರಂಭಿಸಲು ಸಲಹೆ ನೀಡಿತು. ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಪಿಡಿಒ ರವೀಂದ್ರ ಕುಲಕರ್ಣಿ, ಎಸ್‌ಬಿಎಂ ಯೋಜನೆ ಜಿಲ್ಲಾ ಸಮಾಲೋಚಕರಾದ ಹುಡೇದ್ ಬಸಮ್ಮ, ಮಾರುತಿ ನಾಯ್ಕರ್, ಎಸ್‌ಡಿಎ ಭಾರತಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಸಿಬ್ಬಂದಿ ಆನಂದ, ಸೋಮನಾಥ ಇತರರಿದ್ದರು.