ಕುಕನೂರು ಗುದ್ನೆಪ್ಪನಮಠದ ಮುಜರಾಯಿ ಇಲಾಖೆ ಭೂಮಿಯಲ್ಲಿ ಗುತ್ತಿಗೆ ಆಧಾರದಡಿ ಶುಕ್ರವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಭೂಮಿಪೂಜೆ ನೆರವೇರಿಸಿದರು. ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದೇಶ ಮಾಳೆಕೊಪ್ಪ, ಪಿಡಬ್ಲುೃಡಿ ಅಧಿಕಾರಿ ಮಲ್ಲಿಕಾರ್ಜುನ, ಪಂಚಾಯತ್ ರಾಜ್ಯ ಇಲಾಖೆ ಅಧಿಕಾರಿ ರಾಜಶೇಖರ ಮಳಿಮಠ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ ಇದ್ದರು.
- ಡಿಸಿ ಡಾ.ಸುರೇಶ ಇಟ್ನಾಳ ಹೇಳಿಕೆ
- ವ್ಯಾಜ್ಯ ರಹಿತ ಜಮೀನಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಭೂಮಿಪೂಜೆ
ಕುಕನೂರು: ತಾಲೂಕು ಆಡಳಿತದ ಪ್ರಜಾಸೌಧ ಕಟ್ಟಡ ಗುಣಮಟ್ಟದಿಂದ ನಿರ್ಮಾಣ ಮಾಡಿ, ನಿಗದಿ ಅವಧಿಯೊಳಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ಗುದ್ನೆಪ್ಪನಮಠದ ಮುಜರಾಯಿ ಇಲಾಖೆ ಭೂಮಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಕ್ರವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 18.55 ಕೋಟಿ. ರೂ. ವೆಚ್ಚದಲ್ಲಿ 16.30 ಎಕರೆ ಭೂಮಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಇದು ಮುಜರಾಯಿ ಇಲಾಖೆಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ತಾಲೂಕಾಡಳಿತ ಕಚೇರಿ, ನ್ಯಾಯಾಲಯ, ಬುದ್ದ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪಡೆಯಲಾಗಿದೆ. ಭೂಮಿಯ ಗುತ್ತಿಗೆ ಹಣ ದೇವಸ್ಥಾನದ ಖಾತೆಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ದೇವಸ್ಥಾನ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು, ಪ್ರಜಾಸೌಧ ನಿರ್ಮಾಣ ಆಗುವ ಸ್ಥಳಕ್ಕೆ ಆಗಮಿಸಲು ಸೂಕ್ತ ರಸ್ತೆ ನಿರ್ಮಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಬರ ಆವರಿಸಿರುವ ಕಾರಣ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. 4 ಕೋಟಿ ರೂ. ಕುಡಿವ ನೀರಿಗೆ ಹಾಗೂ ನೀರಿನ ಮೂಲಗಳ ದುರಸ್ತಿಗೆ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಶೇ.47 ಮಾತ್ರ ಬಿತ್ತನೆಯಾಗಿದೆ. ಬೆಳೆಗಳಿಗೆ ರೈತರು ವಿಮೆ ಭರಿಸಬೇಕು. ವಿಮೆಯಲ್ಲಿ ಮಧ್ಯ ಹಂಗಾಮಿನ ಬೆಳೆ ವಿಮೆಯಾಗಿ ಶೇ.25 ಮಂಜೂರು ಮಾಡಿಸಲಾಗುವುದು. ಮಳೆ ಪ್ರಮಾಣ ಕಡಿಮೆ ಇದ್ದು, ಸೂಪರ್ ಎಲ್‌ನಿನೋ ಪರಿಣಾಮ ಮುಂದಿನ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ತಿಂಗಳಲ್ಲೂ ಮಳೆಯ ಪ್ರಮಾಣ ಕಡಿಮೆ ಇದೆ ಎಂದರು.
ಪವರ್ ಟ್ರಾನ್ಸ್‌ಮಿಷನ್‌ಗೆ ಲೈನ್‌ಗೆ ಜಿಲ್ಲಾಧಿಕಾರಿಯಾಗಿ ನಾನು ಭೂಮಿ ಕೊಡಿಸಬೇಕು. ಆದರೆ ಸೋಲಾರ್, ವಿಂಡ್ ಪವರ್ ಅವರಿಗೆ ರೈತರು ಹಾಗೂ ಆಯಾ ಕಂಪನಿಗಳಿಗೆ ಭೂಮಿ ವಿಚಾರ ಮಾತ್ರ ಇರುತ್ತದೆ. ಚಂಡೂರು, ಬೆಣಕಲ್ ಬಳಿ 770 ಕೆವಿ ವಿದ್ಯುತ್ ಸ್ಥಾವರ ಘಟಕಕ್ಕೆ ಸ್ಥಳೀಯ ಶಾಸಕರು ಭೂಮಿ ನೀಡಬೇಡಿ ಎಂದು ಪತ್ರ ಬರೆದಿದ್ದರು. ನಾನು ಸಹ ಅದನ್ನು ಇಂಧನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದೀಗ ರೈತರು ಭೂಮಿ ಕೊಡುತ್ತೇವೆ ಎಂದು ಬಂದಿದ್ದಾರೆ. ಸದ್ಯ ಇಂಧನ ಇಲಾಖೆಗೆ ಭೂಮಿ ಖರೀದಿ ಹೊಣೆಗಾರಿಕೆ ಇದೆ ಎಂದು ವಿವರಿಸಿದರು.
ನ್ಯಾಯಾಲಯದಲ್ಲಿರುವ ಗುದ್ನೆಪ್ಪನಮಠದ ಭೂಮಿ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾಲಯ ಕಟ್ಟಡ ನಿರ್ಮಾಣ ಪರ ಆದೇಶ ನೀಡಿದೆ. ಸದ್ಯ ಅರ್ಜಿದಾರರು ನಮ್ಮಗಳ ಭೂಮಿ ಎಲ್ಲಿದೆ ಎಂದು ನ್ಯಾಯಾಲಯ ಮೊರೆ ಹೋಗಿದ್ದಾರೆ. ವಿವಾದ ರಹಿತವಾದ ಭೂಮಿಯಲ್ಲಿ ಬಂದು ಭೂಮಿಪೂಜೆ ಮಾಡಿದ್ದೇನೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ನಾಗೇಶ, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಪ್ರಮುಖರಾದ ನಾರಾಯಣಪ್ಪ, ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಶರಣಪ್ಪ ಗಾಂಜಿ, ಮಂಜುನಾಥ ಸೋಂಪೂರು, ಮಲ್ಲಿಕಾರ್ಜುನ ಜಕ್ಕಲಿ, ಮಂಜುನಾಥ ಯಡಿಯಾಪುರ, ಉದಯ ರಾಯರಡ್ಡಿ ವೀರಯ್ಯ ತೋಂಟದಾರ್ಯಮಠ, ಅಶೋಕ ತೋಟದ, ಪರಶುರಾಮ ಸಕ್ರಣ್ಣನವರ್, ಮಹಾಂತೇಶ ಜಂಗ್ಲಿ ಇತರರಿದ್ದರು.
ನನಗೂ ಇದು ಹೊಸದು
ಕಾಮಗಾರಿ ಭೂಮಿ ಪೂಜೆಗೆ ಶಾಸಕರು, ಸಂಸದರು ಆಗಮಿಸಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿ, ನನಗೂ ಇದು ಹೊಸ ಅನುಭವ. ನಾನು ಸಹ ಇದೇ ಮೊದಲು ಜನಪ್ರತಿನಿಧಿಗಳಿಲ್ಲದೇ ಭೂಮಿಪೂಜೆ ಮಾಡಿದ್ದೇನೆ ಎಂದರು.