ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಬೆಣಕಲ್, ಚಂಡೂರು ಗ್ರಾಮದ ರೈತರು ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಮಂಜುನಾಥ ಬಗನಾಳ, ಮಂಜುನಾಥ ರಾಠೋಡ, ಭೀಮಪ್ಪ ಕುರಿ, ಪರಸಪ್ಪ, ಸಂತೋಷ ಬನ್ನಿಕೊಪ್ಪ, ಪರಮೇಶ ಹಾಲವರ್ತಿ ಇತರರಿದ್ದರು.
- ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಡಿಸಿ ಡಾ.ಸುರೇಶ್ ಬಿ.ಇಟ್ನಾಳಗೆ ಮನವಿ
ಕುಕನೂರು: ತಾಲೂಕಿನ ಬೆಣಕಲ್ ಹಾಗೂ ಚಂಡೂರು ಗ್ರಾಮದಲ್ಲಿ 765 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಭೂಮಿ ನೀಡಲು ಒಪ್ಪಿಕೊಂಡಿದ್ದೇವೆ ಎಂದು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಬೆಣಕಲ್, ಚಂಡೂರು ರೈತರು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳಗೆ ಬುಧವಾರ ಮನವಿ ಸಲ್ಲಿಸಿದರು.
ಬೆಣಕಲ್ ಹಾಗೂ ಚಂಡೂರು ಗ್ರಾಮದಲ್ಲಿ 765 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗಾಗಿ 150-160 ಎಕರೆ ಜಮೀನನ್ನು ಪ್ರತಿ ಎಕರೆಗೆ 32 ಲಕ್ಷ ರೂ.ನಂತೆ ಮಾರಾಟ ಮಾಡಲು ಎಲ್ಲರೂ ಒಪ್ಪಿಕೊಂಡಿದ್ದೇವೆ. ವಿದ್ಯುತ್ ಕೇಂದ್ರ ಸ್ಥಾಪನೆಗಾಗಿ ನೀಡುತ್ತಿರುವ ಜಮೀನು ಸವಳು ಭೂಮಿಯಾಗಿದ್ದು, ಯಾವುದೇ ಬೆಳೆ ಸರಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ದಶಗಳಿಂದ ಉಳುಮೆ ಮಾಡಿ ಸಾಲಗಾರರಾಗುತ್ತಿದ್ದೇವೆ.
ಸರ್ಕಾರದಿಂದ ಜಮೀನುಗಳನ್ನು ಖರೀದಿಸಿ ಆದಷ್ಟು ಬೇಗನೆ ಪರಿಹಾರ ನೀಡಬೇಕು. ಇದರಿಂದ ಬಂದ ಹಣದಿಂದ ಬೇರೆ ಕಡೆ ಭೂಮಿ ಖರೀದಿಸಿ ಜೀವನ ನಡೆಸುತ್ತೇವೆ. ಈ ಕುರಿತು ಶಾಸಕ ಬಸವರಾಜ ರಾಯರಡ್ಡಿ ಅವರು ರೈತರ ಮುಂದಿನ ಭವಿಷ್ಯದ ದೃಷ್ಠಿಯಿಂದ ನಮ್ಮ ಗ್ರಾಮಗಳಲ್ಲಿ ಜಮೀನು ಖರೀದಿ ಮಾಡದೇ ರೈತರಿಗೆ ಭೂಮಿ ಉಳಿಯಲಿ ಮತ್ತು ಲಭ್ಯವಿರುವ ಸರ್ಕಾರದ ಜಮೀನುಗಳಲ್ಲಿ ವಿದ್ಯುತ್ ಕೇಂದ್ರ ಸ್ಥಾಪಿಸುವಂತೆ ಪತ್ರ ಬರೆದಿದ್ದಾರೆ. ಅವರು ನಮ್ಮ ಬಗ್ಗೆ ತೋರಿಸಿದ ಕಾಳಜಿಗೆ ಆಭಾರಿಯಾಗಿರುತ್ತೇವೆ. ಕೂಡಲೇ ನಮ್ಮ ಜಮೀನನ್ನು ಖರೀದಿಸಿ ಸೂಕ್ತ ಪರಿಹಾರಕ್ಕೆ ಅನುಮೋದನೆ ನೀಡಲಿ ಎಂದು ಒತ್ತಾಯಿಸಿದರು.
ಪ್ರಮುಖರಾದ ಮಂಜುನಾಥ ಬಗನಾಳ, ಮಂಜುನಾಥ ರಾಠೋಡ, ಭೀಮಪ್ಪ ಕುರಿ, ಪರಸಪ್ಪ, ಸಂತೋಷ ಬನ್ನಿಕೊಪ್ಪ, ಬೀರಪ್ಪ ಕರಿಗಾರ, ಹನುಮಪ್ಪ ಕುರಿ, ಪರಪ್ಪ ಬನ್ನಿಕೊಪ್ಪ, ಶಿವಮೂರ್ತಿಪ್ಪ ಹಕ್ಕಿ, ಈರಪ್ಪ ಕರಿಗಾರ, ಗವಿಸಿದ್ದಪ್ಪ ಹಾಲವರ್ತಿ, ಪರಮೇಶ ಹಾಲವರ್ತಿ ಇತರರಿದ್ದರು.