ಗಂಗಾವತಿ ಸರ್ವೇಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೆಂಬಲಿಗರ ಸಭೆಯಲ್ಲಿ ಮಾಜಿ ಎಂಎಲ್ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಮಂಗಳವಾರ ಮಾತನಾಡಿದರು. ಪ್ರಮುಖರಾದ ರಾಜಶೇಖರ್ ಮುಷ್ಟೂರು, ಸುರೇಶ ಗೌರಪ್ಪ, ಗೌಳಿ ರಮೇಶ, ಅಯೂಬ್‌ಖಾನ್ ಇತರರಿದ್ದರು. 
ಕೊಪ್ಪಳ

ಜಿಲ್ಲೆಯಲ್ಲಿ ಬಣ-ಜಾತಿ ರಾಜಕಾರಣ ಸಕ್ರಿಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆರೋಪ
  • ಸಪಕ್ಷ ಮುಖಂಡರ ನಡೆಗೆ ಆಕ್ಷೇಪ
ಗಂಗಾವತಿ: ಸ್ವಾರ್ಥ ರಾಜಕಾರಣದ ಹಿಂದೆ ಬಿದ್ದಿರುವ ಕಾಂಗ್ರೆಸ್ ಮುಖಂಡರು ಗಂಗಾವತಿ ವಿಧಾನಸಭೆ ಕ್ಷೇತ್ರವನ್ನು ಕಡೆಗಣಿಸುತ್ತಿದ್ದು, ಹೋರಾಟದ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಮಾಜಿ ಎಂಎಲ್ಸಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಸರ್ವೇಶ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು. ಪಕ್ಷದಿಂದ ಅಧಿಕಾರ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ ಜಾತಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಕ್ಷೇತ್ರವನ್ನು ಸಂಪೂರ್ಣ ಮರೆತಿದ್ದಾರೆ. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ ಎಚ್‌ಆರ್‌ಜಿ ಕುಟುಂಬವನ್ನು ಕಡೆಗಣಿಸುತ್ತಿದ್ದು, ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಪುರ ಅಸಹಾಯಕರಾಗಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ನಾಮನಿರ್ದೇಶನ ಸೇರಿ ಯಾವುದೇ ಕೆಲಸಗಳಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಗಂಗಾವತಿಗೆ ಬರದೇ ಹೊರಗಡೆಯಿಂದಲೇ ಸಂಚರಿಸಿದರೆ, ಸಂಸದ ರಾಜಶೇಖರ್ ಹಿಟ್ನಾಳ ಸ್ವಜಾತಿ ಕಾರ್ಯಕರ್ತರೊಂದಿಗೆ ಮಾತ್ರ ಸಂಪರ್ಕವಿಟ್ಟುಕೊಂಡಿದ್ದಾರೆ ಎಂದು ದೂರಿದರು.

ಸ್ವಾರ್ಥಿಗಳ ವಿರುದ್ಧ ಹೋರಾಟ ಎಚ್ಚರಿಕೆ

ನಾಮನಿರ್ದೇಶನ ಮತ್ತು ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ನಮ್ಮನ್ನು ಮತ್ತು ನಮ್ಮ ಬೆಂಬಲಿಗರನ್ನು ಕಡೆಗಣಿಸಲಾಗುತ್ತಿದೆ. ನಮ್ಮನ್ನು ವಿಶ್ವಾಸ ತೆಗೆದುಕೊಳ್ಳುವಲ್ಲಿ ಮುಖಂಡರು ವಿಲವಾಗಿದ್ದು, ಶಿಾರಸು ಮಾಡಿರುವ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಕಾರ್ಯಕರ್ತರು ಅತಂತ್ರರಾಗಿದ್ದು, ನೆಲೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿನ ಪಕ್ಷದ ಪರಿಸ್ಥಿತಿಯನ್ನು ಹೈಕಮಾಂಡ್ ಗಮನಕ್ಕೆ ತರಲಾಗುತ್ತಿದ್ದು, ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ. ನನಗೆ ಯಾರ ಮೇಲೂ ದ್ವೇಷವಿಲ್ಲ, ಅಧಿಕಾರದ ಆಸೆಯೂ ಇಲ್ಲ. ಪಕ್ಷ ಸಂಘಟಿಸುವುದು ಮೂಲ ಉದ್ದೇಶವಾಗಿದ್ದು, ಅಧಿಕಾರದಲ್ಲಿರುವ ಮುಖಂಡರು ಸಾಥ್ ನೀಡಬೇಕಿದೆ. ನಿರ್ಲಕ್ಷಿಸಿದರೆ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಬೆಂಬಲಿಗರೊಂದಿಗೆ ಸ್ವಾರ್ಥ ಮುಖಂಡರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿದರು.
ಪ್ರಮುಖರಾದ ರಾಜಶೇಖರ್ ಮುಷ್ಟೂರು, ಸುರೇಶ ಗೌರಪ್ಪ, ಗೌಳಿ ರಮೇಶ, ಮಹೇಶ ಸಾಗರ, ಅಯೂಬ್‌ಖಾನ್, ರಾಮಣ್ಣ, ಶಬ್ಬಿರ್ ಭರಣಿ, ಜೋಗದ ವಸಂತನಾಯಕ, ಮಹ್ಮದ್ ಅಲಿ, ಸೈಯದ್ ನಾಜನೀನ್, ವೀರನಗೌಡ, ಶೇಖರಗೌಡ ಇತರರಿದ್ದರು.

ವರ್ಗಾವಣೆಯಲ್ಲಿ ನಿರತ...

ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ಮರೆತ ಹಾಲಿ ಮತ್ತು ಮಾಜಿ ಸಚಿವರಿಬ್ಬರೂ ತಾಲೂಕಿನ ಅಧಿಕಾರಿಗಳ ವರ್ಗಾವಣೆಯಲ್ಲಿ ನಿರತರಾಗಿದ್ದು, ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಎಚ್.ಆರ್.ಶ್ರೀನಾಥ ಆರೋಪಿಸಿದರು. ಪೈಪೋಟಿ ಮೇಲೆ ವರ್ಗಾವಣೆಗೆ ಶಿಾರಸು ಪತ್ರ ನೀಡುತ್ತಿದ್ದಾರೆ. ವರ್ಗಾವಣೆಗಾಗಿಯೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಗಳೂರಿನಲ್ಲಿ ನೆಲೆಯೂರಿದ್ದರೆ, ಸಚಿವ ಶಿವರಾಜ ತಂಗಡಗಿಯೂ ಅದೇ ಹಾದಿ ಹಿಡಿದಿದ್ದಾರೆ. ಕಾರ್ಯಕರ್ತರ ಬಗ್ಗೆ ಒಮ್ಮೆಯೂ ಯೋಚಿಸಿದ ಇಬ್ಬರ ಬಗ್ಗೆಯೂ ಜಿಲ್ಲೆಯಲ್ಲಿ ಅಸಮಾಧಾನ ಹೆಚ್ಚಾಗಿದೆ. ಸರಿತೂಗಿಸಬೇಕಿದ್ದ ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಪುರ ಅಸಹಾಯಕರಾಗಿದ್ದು, ಮುಖಂಡರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ ಎಂದರು.
"

ಮಾಜಿ ಸಂಸದ ಎಚ್.ಜಿ.ರಾಮುಲು ಎಲ್ಲ ಸಮುದಾಯಕ್ಕೆ ಬೇಕಾಗಿರುವ ನಾಯಕರಾಗಿದ್ದಾರೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷದ ಮುಖಂಡರು ಮನೆಗೆ ಬಂದು ಹಿರಿಯರ ಆಶೀರ್ವಾದ ಪಡೆಯುವುದು ಸಾಮಾನ್ಯ. ಹಾಗಂತ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿಲ್ಲ.

— ಎಚ್.ಆರ್.ಶ್ರೀನಾಥ ಮಾಜಿ ಎಂಎಲ್ಸಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ