ಗಂಗಾವತಿ ಕೆಎ್ಸಿಎಸ್‌ಸಿ ಸಗಟು ಮಳಿಗೆಯಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಪ್ತಿ ಪ್ರಕರಣಗಳ ಪಡಿತರ ಅಕ್ಕಿ ದಾಸ್ತಾನು ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಬಿಡ್‌ದಾರರ ಮಧ್ಯೆ ವಾಗ್ವಾದ ನಡೆಯಿತು. ತಹಸೀಲ್ದಾರ್ ಯು.ವಸಂತಕುಮಾರಿ, ಕಾರಟಗಿ ಆಹಾರ ನಿರೀಕ್ಷಕ ನವೀನ ಮಠದ್ ಮತ್ತು ಬಿಡ್‌ದಾರರಿದ್ದರು. 
ಕೊಪ್ಪಳ

ಜಪ್ತಿ ಪಡಿತರ ಅಕ್ಕಿ ಹರಾಜು ರದ್ದು

ಪ್ರಮುಖ ಮುಖ್ಯಾಂಶಗಳು

  • ಪ್ರಕ್ರಿಯೆ ನಿರ್ವಹಣೆಯಲ್ಲಿ ಅಧಿಕಾರಗಳು ವಿಫಲ
  • ಗಂಗಾವತಿ ಬಿಡ್‌ದಾರರ ಆಕ್ರೋಶ
ಗಂಗಾವತಿ; ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಪಡಿತರ ಅಕ್ಕಿ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಬಿಡ್‌ದಾರರ ಮಧ್ಯೆ ಗುರುವಾರ ನಡೆದ ವಾಗ್ವಾದದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ, ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು.
ಕೆಎ್ಸಿಎಸ್‌ಸಿ ಸಗಟು ಮಳಿಗೆಯಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯಿಂದ 940.70 ಕ್ವಿಂಟಾಲ್ ಪಡಿತರ ಅಕ್ಕಿ ದಾಸ್ತಾನು ವಿಲೇವಾರಿಯ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ವಿವಿಧೆಡೆಯಿಂದ 70ಕ್ಕೂ ಹೆಚ್ಚು ಬಿಡ್‌ದಾರರು ಪಾಲ್ಗೊಂಡಿದ್ದರು. ಹರಾಜು ಪ್ರಕ್ರಿಯೆಯ ಪ್ರಕಟಣೆ ಸಂದರ್ಭದಲ್ಲಿ ವಿಧಿಸಿದ ಷರತ್ತುಗಳು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಷರತ್ತುಗಳಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಬಿಡ್‌ದಾರರು ಆಕ್ಷೇಪಿಸಿದರು. ಸಮರ್ಪಕ ಉತ್ತರ ನೀಡುವಲ್ಲಿ ಅಧಿಕಾರಿಗಳು ಎಡವಿದರಲ್ಲದೆ, ಬೇಜವಾಬ್ದಾರಿಯಿಂದ ವರ್ತಿಸಿದರು. ಇದರಿಂದ ಬಿಡ್‌ದಾರರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಹರಾಜು ಪ್ರಕ್ರಿಯೆಯಲ್ಲಿ ಆಹಾರ ಇಲಾಖೆ ಡಿಡಿ ವಿಶ್ವನಾಥ ಗೈರಾಗಿದ್ದರಲ್ಲದೆ, ಮಾಹಿತಿಯಿಲ್ಲದ ತಹಸೀಲ್ದಾರ್ ಯು.ವಸಂತಕುಮಾರಿ ಅವರು ನಿರ್ವಹಿಸುವಲ್ಲಿ ವಿಲರಾದರು. ಗೊಂದಲದ ಸಮಯದಲ್ಲಿ ಕಾರಟಗಿ ಆಹಾರ ನಿರೀಕ್ಷಕ ನವೀನ ಮಠದ್ ವರ್ತನೆ ಬಿಡ್‌ದಾರರನ್ನು ರೇಗಿಸಿತ್ತಲ್ಲದೆ, ವಿಕೋಪಕ್ಕೆ ಹೋಗಲು ಕಾರಣವಾಯಿತು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ್ದರಿಂದ ಹರಾಜು ಪ್ರಕ್ರಿಯೆ ರದ್ದುಗೊಳಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಹೇಳಿ ಅಧಿಕಾರಿಗಳು ಹೊರ ನಡೆದರು. ಬಿಡ್‌ದಾರರು ಅಸಮಾಧಾನ ವ್ಯಕ್ತಪಡಿಸಿ ನಿರಾಸೆಯಿಂದ ವಾಪಾಸಾದರು. ಡಿಡಿ ವಿಶ್ವನಾಥ ಯಾವುದೇ ಕರೆಗಳನ್ನು ಸ್ವೀಕರಿಸಲ್ಲ. ಕೊಪ್ಪಳದ ಕಚೇರಿಗೆ ತೆರಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಿಡ್‌ದಾರರು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಯು.ವಸಂತಕುಮಾರಿ ಮಾತನಾಡಿ, ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಿದ್ದರಿಂದ ರದ್ದುಗೊಳಿಸಿದ್ದು, ಮರು ಹರಾಜಿಗೆ ನೋಟಿಫಿಕೇಷನ್ ಹೊರಡಿಸಲಾಗುವುದು ಎಂದರು.