ಜಿಲ್ಲೆಯ ಕುಷ್ಟ ತಾಲೂಕಿನಲ್ಲಿ ನಿಮಾರ್ಣವಾಗುತ್ತಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಕೆಪಿಟಿಸಿಎಲ್ ಎಂಡಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಭೇಟಿ ನೀಡಿ ಪರಿಶೀಲಿಸಿದರು.
- ಕೆಪಿಟಿಸಿಎಲ್ ಎಂಡಿ ಸೂಚನೆ
- ವಿದ್ಯುತ್ ಉಪಕೇಂದ್ರ ಕಾಮಗಾರಿ ಸ್ಥಳಕ್ಕೆ ಭೇಟಿ
ಕೊಪ್ಪಳ : ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ಹಸಿರು ಇಂಧನವನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ರವಾನಿಸುವ ಮಹತ್ವದ ಯೋಜನೆಯಾದ ಜಿಲ್ಲೆಯ ಕುಷ್ಟಗಿ 400 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಮಾರ್ಚ್ 2027ರೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ನಿಮಾರ್ಣವಾಗುತ್ತಿರುವ ಬೃಹತ್ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ನಂತರ ಜಿಲ್ಲಾಡಳಿತ ಭವನದಲ್ಲಿ ಡಿಸಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಡೋಣಿ&ಕುಷ್ಟಗಿ ಫೀಡರ್ ಮಾರ್ಗ ಅತ್ಯಂತ ಪ್ರಮುಖವಾಗಿದ್ದು, ಈ ಮಾರ್ಗ ಹಸಿರು ಇಂಧನ ಸಾಗಣೆ ಜೀವನಾಡಿಯಾಗಿದೆ. ಫೀಡರ್ ಮಾರ್ಗದ ಕಾಮಗಾರಿಗೆ ಕೆಲವೆಡೆ ಮಾರ್ಗಾಧಿಕಾರ ಸಮಸ್ಯೆಗಳು ಅಡ್ಡಿಯಾಗಿರುವುದರಿಂದ, ಅವುಗಳನ್ನು ನಿವಾರಿಸಲು ಎಂಜಿನಿಯರಿಂಗ್ ತಂಡಗಳಿಗೆ ಮೂರು ತಿಂಗಳ ಗಡುವು ನೀಡಿದರು.
ಭೂಸ್ವಾಧಿನ ಹಾಗೂ ಆರ್ಒಡಬ್ಲ್ಯು ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡಬೇಕು. ಸ್ಥಳಿಯವಾಗಿ ಉತ್ಪಾದನೆಯಾಗುವ ಸೌರ ಮತ್ತು ಪವನ ವಿದ್ಯುತ್ ಅನ್ನು ರಾಜ್ಯದ ಮುಖ್ಯ ಗ್ರಿಡ್ಗೆ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಈ ಉಪಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಉಪಕೇಂದ್ರದ ಕಾಮಗಾರಿ ಉತ್ತಮ ವೇಗದಲ್ಲಿ ಸಾಗುತ್ತಿದ್ದರೂ, ಫೀಡರ್ ಮಾರ್ಗ ಪೂರ್ಣಗೊಳ್ಳದಿದ್ದರೆ ಉಪಕೇಂದ್ರ ಕಾರ್ಯಾರಂಭ ಸಾಧ್ಯವಾಗುವುದಿಲ್ಲ. ಹೀಗಾಗಿ ಡೋಣಿ&-ಕುಷ್ಟಗಿ ವಿದ್ಯುತ್ ಮಾರ್ಗದ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಪ್ರಸರಣ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಗತ್ಯವಾಗಿದೆ. ಕುಷ್ಟಗಿ ಉಪಕೇಂದ್ರ ಹಾಗೂ ಡೋಣಿ-&ಕುಷ್ಟಗಿ ವಿದ್ಯುತ್ ಮಾರ್ಗವು ಕಲ್ಯಾಣ ಕರ್ನಾಟಕ ಭಾಗದ ವಿದ್ಯುತ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿವೆ ಎಂದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾರ್ಗದರ್ಶನದಂತೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕೆಪಿಟಿಸಿಎಲ್ ಹಾಗೂ ಜಿಲ್ಲಾಡಳಿತ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ಮಾರ್ಚ್ 2027ರೊಳಗೆ ಸಂಪೂರ್ಣ ವ್ಯವಸ್ಥೆ ಕಾರ್ಯಾಚರಣೆಗೆ ಸಜ್ಜಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.