ಹನುಮಸಾಗರದ ರೈತರ ಜಮೀನಿನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ರೈತರೊಂದಿಗೆ ಎಂ. ಪವರಗ್ರಿಡ್ ಕೊಪ್ಪಳ ಗದಗ್ ಟ್ರಾನ್ಸ್‌ಮಿಷನ್ ಲಿ. ವ್ಯವಸ್ಥಾಪಕ ಚಂದನ್, ಇಂಜಿಯರ್ ಮದನ್, ಎಇ ಪರಮೇಶ ಚರ್ಚಿಸಿದರು. 
ಕೊಪ್ಪಳ

ಕಾಮಗಾರಿ ಮುಗಿದ ಬಳಿಕ ಪರಿಹಾರ ವಿತರಣೆ

ನರೇಶ್ ಕುಮಾರ್

ಹನುಮಸಾಗರ: ರೈತರ ಜಮೀನುಗಳಲ್ಲಿ ಎಂ. ಪವರ್‌ಗ್ರಿಡ್ ಕೊಪ್ಪಳ ಗದಗ್ ಟ್ರಾನ್ಸ್‌ಮಿಷನ್ ಲಿ.ನಿಂದ ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಹಸಿರು ಸೇನೆ ಹಾಗೂ ರೈತ ಸಂಘದ ನೇತೃತ್ವದಲ್ಲಿ ಭಾನುವಾರ ರೈತರು ಮುತ್ತಿಗೆ ಹಾಕಿ ಕಂಪನಿ ವ್ಯವಸ್ಥಾಪಕ ಹಾಗೂ ಇಂಜಿನಿಯಳೊಂದಿಗೆ ವಾಗ್ವಾದ ನಡೆಸಿದರು.  

ಹೈಟೆನ್ಷನ್ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಹಾಕುವಾಗ ಜಮೀನಿನಲ್ಲಿ ನಾಶ ಮಾಡಿದ ಬೆಳೆಗಳು, ಮರಗಳಿಗೆ, ಮನೆ, ಶೆಡ್ ಹಾಗೂ ಬೋರ್‌ವೆಲ್‌ಗಳಿಗೆ ಮೊದಲೇ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
 ಎ.ಪವರ್‌ಗ್ರಿಡ್ ಕಂಪನಿಯ ವ್ಯವಸ್ಥಾಪಕ ಚಂದನ್ ಪ್ರತಿಕ್ರಿಯಿಸಿ, ಕಂಬ ಅಳವಡಿಸಲು ಪ್ರತಿಚದರ ಮೀಟರ್‌ಗೆ 2600 ರೂ. ಹಾಗೂ ವಿದ್ಯುತ್ ಮಾರ್ಗಗಳು ಹಾದು ಹೋಗುವ ಮೊಗಸಾಲೆಗೆ ಪ್ರತಿ ಚದರ ಮೀಟರ್‌ಗೆ 40 ರೂ. ಪರಿಹಾರ ನೀಡುತ್ತೇವೆ. ಆದರೆ, ಬೆಳೆಗಳಿಗೆ ಪರಿಹಾರದ ಮೊತ್ತವನ್ನು ಈಗಲೇ ಹೇಳಲು ಸಾಧ್ಯವಿಲ್ಲ. 
ಕೆಲಸ ಮಾಡುವಾಗ ಹೆಚ್ಚಿನ ಬೆಳೆ ನಾಶ ಆಗಬಹುದು. ಅದಕ್ಕಾಗಿ ಸಂಪೂರ್ಣ ಕೆಲಸ ಮುಗಿದ ನಂತರ ಬೆಳೆ ಹಾನಿ ಆಧಾರದ ಮೇಲೆ ಲೆಕ್ಕ ಮಾಡಿ ಡಿಸಿಗೆ ಮಾಹಿತಿ ನೀಡುತ್ತೇವೆ. ಆಗ ಡಿಸಿ ಕಚೇರಿ ಮೂಲಕ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು. 
ಇನ್ನು ಗಿಡ ಮರಗಳಿಗೆ ಅರಣ್ಯ ಇಲಾಖೆ, ಹೊಲದ ಮನೆಗಳಿಗೆ ಪಿಡಬ್ಲುೃಡಿ ಹಾಗೂ ಕೊಳವೆಬಾವಿಗೆ ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿಗಳು ಭೇಟಿ ನಿಡಿ ಪರಿಹಾರದ ಮೊತ್ತ ನಿಗದಿಪಡಿಸುತ್ತಾರೆ. ಅದರಂತೆ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದು ಮನವರಿಕೆ ಮಾಡಿದರು. 
ಈ ವೇಳೆ ರೈತ ಸಂಘದ ಅಧ್ಯಕ್ಷರಾದ ಶರಣಪ್ಪ ಕಮತರ, ಶರಣಪ್ಪ ಬಾಚಲಾಪುರ, ಯಮನೂರಪ್ಪ ಮಡಿವಾಳರ, ಮಹಾಂತೇಶ ಬ್ಯಾಳಿ, ರೈತರಾದ ಶಿವಪುತ್ರಪ್ಪ ಕೆ., ಹನುಮಂತಪ್ಪ ಹಲಕೂಲಿ, ಮುರ್ತುಜಾಸಾಬ್ ಕುಷ್ಟಗಿ, ಚಂದ್ರಶೇಖರ ಗಡೇಕಾರ, ಮಹ್ಮದಸಾಬ್ ಕುಷ್ಟಗಿ ಹಾಗೂ ಯರಗೇರಾ, ಬಮಡರಗಲ್ಲ, ಮುದಟಗಿ ಗ್ರಾಮದ ರೈತರು ಇದ್ದರು.