ಕಾರಟಗಿಯಲ್ಲಿ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮೇಗೌಡ ಇತರರಿದ್ದರು.
- ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ
- ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ
ಕಾರಟಗಿ: ಸಮಾಜಕ್ಕೆ ಯಾರಿಂದ ಕೊಡುಗೆ ದೊರೆಯುತ್ತದೆ ಎಂಬುದನ್ನು ಅರಿತು ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಅಲ್ಲದೇ, ಸಮುದಾಯ ಭವನಕ್ಕೆ 1ಕೋಟಿ ರೂ. ನೀಡಿದ್ದು, ಹೆಚ್ಚುವರಿ ಅನುದಾನ ನೀಡಲು ಮುಂದೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಬೂದಗುಂಪಾ ರಸ್ತೆಯಲ್ಲಿ 1ಕೋಟಿ ರೂ. ವೆಚ್ಚದ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಧಿಕಾರ, ಅಂತಸ್ತು, ಪಕ್ಷವನ್ನು ಬದಿಗಿಟ್ಟು ಜನಸೇವೆಗೆ ದೊರೆತ ಅವಕಾಶದಲ್ಲಿ ನಮ್ಮ ಕೆಲಸಗಳೇ ಮುಖ್ಯವಾಗುತ್ತವೆ. ಕನಕಗಿರಿ ಕ್ಷೇತ್ರದ ಜನರು 3ಬಾರಿ ಗೆಲ್ಲಿಸಿದ್ದು, ಅವರ ಸೇವೆ ಮಾಡುತ್ತಿದ್ದೇನೆ. ಮುಂದೆ ಮೀಸಲಾತಿ ಬಂದ ನಂತರ ನಿಮ್ಮ ಹತ್ತಿರ ಬರುತ್ತೇನೆ. ನೀವೂ ಆಶೀರ್ವದಿಸಿ, ನಿಮ್ಮ ಸೇವೆ ಮಾಡುತ್ತೇನೆ. ಕ್ಷೇತ್ರದಲ್ಲಿ ಕೆರೆ ತುಂಬುವ ಯೋಜನೆಯಿಂದ 11ಸಾವಿರ ಹೆಕ್ಟೇರ್ ಭೂಮಿಗೆ ನೀರುಣಿಸಲು ಸಾಧ್ಯವಾಗಿದೆ. ಸಕ್ಕರೆ ಸಚಿವರಾಗಿದ್ದಾಗ ಮರಳಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಬಾಕಿವೇತನ ಬಿಡುಗಡೆಗೊಳಿಸಲು ಸಾಧ್ಯವಾಯಿತು. ಅಲ್ಲದೇ, ಎಪಿಎಂಸಿಗಳಲ್ಲೂ ಅಭಿವೃದ್ಧಿ ಮಾಡಲಾಗಿದೆ.
ಅನುದಾನ ಹಂಚಿಕೆಯಲ್ಲಿ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಾಗುತ್ತಿದೆ. ಈಗ ಸಮುದಾಯ ಭವನಕ್ಕೆ ಅನುದಾನ ನೀಡಿದ್ದು, ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಪೂರ್ಣಗೊಳ್ಳಬೇಕಾದರೆ, ಮತ್ತೊಂದು ಅವಕಾಶಕ್ಕೆ ನಿಮ್ಮ ಆಶೀರ್ವಾದ ಬೇಕಿದೆ ಎಂದರು. ಚುನಾವಣೆಗೆ ಇನ್ನೂ 2 ವರ್ಷ ಬಾಕಿಯಿರುವಾಗಲೇ ಪ್ರಚಾರ ಆರಂಭಿಸಿದಂತಿತ್ತು. ಅಲ್ಲದೇ, ಮತ್ತೊಂದು ಅವಕಾಶದ ಬಳಿಕ ಮೀಸಲಾತಿ ಬಂದರೆ ನೆರೆಯ ಗಂಗಾವತಿಯಲ್ಲೂ ಸ್ಪರ್ಧಿಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಶಿವರಾಮೇಗೌಡ, ಸಂಗಣ್ಣ ಕರಡಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್, ಚನ್ನಬಸಪ್ಪ ಸುಂಕದ್, ಶಶಿಧರಗೌಡ ಪಾಟೀಲ್, ಶರಣೇಗೌಡ ಮಾಲಿಪಾಟೀಲ್, ವಿಜಯಕುಮಾರ್ ಕೋಲ್ಕಾರ್, ಶಿವರೆಡ್ಡಿ ನಾಯಕ ಇತರರಿದ್ದರು.