ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿ, ಡಿಸಿಗೆ ವರದಿ ನೀಡುವಂತೆ ಆದೇಶಿಸಿರುವ ಪ್ರತಿ.
ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಆಯೋಗ ಆದೇಶ
ಕನಕಗಿರಿ: ಪಟ್ಟಣದ 2ನೇ ವಾರ್ಡ್‌ನ ಚಿದಾನಂದ ಮಠ, ಗೌಡ್ರ ಓಣಿ, ಕನಕಾಚಲ ದೇವಸ್ಥಾನ ವ್ಯಾಪ್ತಿಯಲ್ಲಿ ಮಂಗಳವಾರ ಪಪಂ ಸದಸ್ಯ, ಪೌರ ಕಾರ್ಮಿಕ ಸೇರಿ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ಮಾಡಿ ಗಾಯಗೊಳಿಸಿದ್ದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ವಿಜಯವಾಣಿ ಪತ್ರಿಕೆಯಲ್ಲಿ ಫೆ.4ರಂದು ಹುಚ್ಚು ನಾಯಿ ಕಡಿತ 8 ಜನರಿಗೆ ಗಾಯ ಶೀರ್ಷಿಯಡಿ ವರದಿ ಪ್ರಕಟಿಸಲಾಗಿತ್ತು. ಇದನ್ನು ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು, ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ವಾನಗಳ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು.
ಅಲ್ಲದೇ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ 5 ದಿನದಲ್ಲಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ಶಶಿಧರ ಕೊಸುಂಬೆ ಆದೇಶಿಸಿದ್ದಾರೆ.