ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಮರ್ಸ್ ಕನೆಕ್ಟ್-2026 ಕಾಲೇಜು ಉತ್ಸವವನ್ನು ಪ್ರಾಚಾರ್ಯ ಬಜರಂಗಬಲಿ ಉದ್ಘಾಟಿಸಿದರು. ಉಪನ್ಯಾಸಕರಾದ ನಫೀಸಾ ಬಾನು, ರಕ್ಷಿತ್ ಎ., ಸಂಗಮೇಶ್, ಸರ್ವಮಂಗಳಮ್ಮ ಟಿ.ಆರ್, ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರಪ್ಪ ಕಂಚಿ ಇತರರಿದ್ದರು.
- ಪದವಿ ಕಾಲೇಜಿನ ಪ್ರಾಚಾರ್ಯ ಬಜರಂಗಬಲಿ ಅಭಿಮತ
- ಕನಕಗಿರಿ ಕಾಮರ್ಸ್ ಕನೆಕ್ಟ್ ಕಾಲೇಜು ಉತ್ಸವ
ಕನಕಗಿರಿ: ವಾಣಿಜ್ಯಶಾಸ ಶಿಕ್ಷಣವು ಸೈದ್ಧಾಂತಿಕ ಜ್ಞಾನದ ಜತೆಗೆ ಪ್ರಾಯೋಗಿಕ ಅನುಭವ ಬಯಸುತ್ತದೆ ಎಂದು ಪ್ರಾಚಾರ್ಯ ಬಜರಂಗಬಲಿ ಹೇಳಿದರು.
ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ ವಿಭಾಗದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಮರ್ಸ್ ಕನೆಕ್ಟ್-2026 ಕಾಲೇಜು ಉತ್ಸವ ಉದ್ಘಾಟಿಸಿ ಮಾತನಾಡಿದರು. ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಾಧಾರಿತ ಸ್ಪರ್ಧೆಗಳು, ವಿದ್ಯಾರ್ಥಿಗಳಲ್ಲಿ ಅಡಗಿರುವ ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಕಲಿಸಲಿವೆ. ಪದವೀಧರರನ್ನು ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಿ, ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.
ಬಹುಮಾನ: ಬಿ.ಕಾಂ ಮೂರೂ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಈ ಉತ್ಸವದಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾಲ್ಕು ವಿಭಾಗಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಗುಂಪು ವಿಭಾಗದ ಬಿಜಿನೆಸ್ ಕ್ವಿಜ್ ಸ್ಪರ್ಧೆಯಲ್ಲಿ ಅಕ್ಷತಾ ತಂಡ (ಪ್ರಥಮ), ಗೀತಾ ತಂಡ (ದ್ವಿತೀಯ) ಹಾಗೂ ದೇವರಾಜ್ ಮತ್ತು ವಿಶಾಲಾಕ್ಷಿ ತಂಡದವರು ತೃತೀಯ ಸ್ಥಾನ ಪಡೆದುಕೊಂಡರೆ, ವೈಯಕ್ತಿಕ ವಿಭಾಗದ ಪ್ರಾಡಕ್ಟ್ ಅಡ್ವರ್ಟೈಸಿಂಗ್ ಸ್ಪರ್ಧೆಯಲ್ಲಿ ಹುಸೇನ್ ಬಾಷಾ (ಪ್ರಥಮ), ಸುಮಿತ್ರಾ (ದ್ವಿತೀಯ) ಹಾಗೂ ದೇವರಾಜ್ (ತೃತೀಯ) ಸ್ಥಾನ ಪಡೆದುಕೊಂಡರು. ಪಿಪಿಟಿ ಪ್ರಸ್ತುತಪಡಿಸುವಿಕೆಯಲ್ಲಿ ನಿರುಪಾದಿ (ಪ್ರಥಮ) ಹಾಗೂ ಬಾಜಪ್ಪ (ದ್ವಿತೀಯ) ಸ್ಥಾನ ಪಡೆದುಕೊಂಡರು. ಕಾಲೇಜ್ ಕೋರ್ಸ್ ಪ್ರಮೋಷನ್ ಸ್ಪರ್ಧೆಯಲ್ಲಿ ನಿರುಪಾದಿ ತಂಡ (ಪ್ರಥಮ) ಬಹುಮಾನ ಪಡೆದುಕೊಂಡಿತು. ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರಪ್ಪ ಕಂಚಿ, ಶಂಭುಲಿಂಗಯ್ಯ ಸ್ವಾಮಿ, ಮಾರುತಿ, ವಿಜಯ್ ಸರೋದೆ, ಆನಂದ್ ಕಂಚಿ ಇತರರಿದ್ದರು.