- ಸುಂಕಪ್ಪ ಮಾಲಗಿತ್ತಿ ಹೇಳಿಕೆ
- ಮಾ.24ರಂದು ಬೆಂಗಳೂರು ಚಲೋ
ಕೊಪ್ಪಳ: ಒಳಮೀಸಲಾತಿ ರೊಸ್ಟರ್ ಹಂಚಿಕೆ ವಿರೋಧಿಸಿ ಹಾಗೂ ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಲು ಒತ್ತಾಯಿಸಿ ಮಾರ್ಚ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದದಿಂದ ಬೆಂಗಳೂರು ಚಲೋ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ತಿಳಿಸಿದರು.
ಶನಿವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚಿನ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಬಿ ಮತ್ತು ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಿರುವುದು ಅಪ್ರಾಯೋಗಿಕ ಮತ್ತು ಅನ್ಯಾಯವಾಗಿದೆ. ಸರ್ಕಾರವು 56 ಸಾವಿರ ಹುದ್ದೆಗಳನ್ನು ಹಳೆ ಮೀಸಲಾತಿಯಂತೆ ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ, ಇದನ್ನು ತಕ್ಷಣವೇ ಜಾರಿಗೆ ತಂದು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದರು.
ನ್ಯಾ. ನಾಗಮೋಹನ್ ದಾಸ್ ಸಮಿತಿಯ ದತ್ತಾಂಶಗಳು ದೋಷಪೂರಿತವಾಗಿವೆ. ದೇಶವ್ಯಾಪಿ ನಡೆಯುತ್ತಿರುವ ಜನಗಣತಿಯ ಸಮಗ್ರ ಮಾಹಿತಿ ಬರುವವರೆಗೆ ಒಳಮೀಸಲಾತಿ ಬಗ್ಗೆ ಏಕಪಕ್ಷೀಯ ನಿರ್ಧಾರ ಮಾಡಬಾರದು. ಪ್ರತಿಭಟನೆಯಲ್ಲಿ ಲಂಬಾಣಿ, ಭೋವಿ, ಕೊರಮ, ಛಲವಾದಿ ಸೇರಿದಂತೆ ವಿವಿಧ ಸಮುದಾಯಗಳ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ತಾಲೂಕು ಅಧ್ಯಕ್ಷ ಹುಚ್ಚಪ್ಪ,ತಾಲೂಕು ಪ್ರಧಾನ ಕಾರ್ಯದರ್ಶಿ ಹುಲುಗಪ್ಪ ಭೋವಿ, ಲಕ್ಷ$್ಮಣ ಪೂಜಾರ ಹಾಗೂ ರಾಮಣ್ಣ ವಡ್ಡರ್ ಇತರರಿದ್ದರು.