ಕನಕಗಿರಿಯ ಇಂದಿರಾ ಕ್ಯಾಂಟೀನ್‌ಗೆ ಪಪಂ ಮುಖ್ಯಾಧಿಕಾರಿ ರಾಜಶೇಖರ ಗುರುವಾರ ಭೇಟಿ ನೀಡಿ ಸೌಧೆಯಲ್ಲಿ ಅಡುಗೆ ಮಾಡಿರುವುದನ್ನು ವೀಕ್ಷಿಸಿದರು. ಉಪಾಧ್ಯಕ್ಷ ಕಂಠಿರಂಗ ನಾಯಕ, ಸಚಿವರ ಆಪ್ತ ಸಹಾಯಕ ವೆಂಕಟೇಶ ಇತರರಿದ್ದರು. 
ಕೊಪ್ಪಳ

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಕಂಡ ಸಿಒ

ಕನಕಗಿರಿ: ಉದ್ಘಾಟನೆಗೊಂಡ ವರ್ಷದೊಳಗೆ ಹಳ್ಳ ಹಿಡಿದಿರುವ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಪ್ರಭಾರ ಮುಖ್ಯಾಧಿಕಾರಿ ರಾಜಶೇಖರ ಭೇಟಿ ನೀಡಿ, ಅವ್ಯವಸ್ಥೆಯನ್ನು ಕಣ್ಣಾರೆ ಕಂಡರು. 

ಬಡ, ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲು ಕಳೆದ ವರ್ಷ ನವೆಂಬರ್‌ನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬೆಳಗ್ಗೆ ಪಲಾವ್, ಮಧ್ಯಾಹ್ನ ಅನ್ನ ಸಾಂಬರ್ ನೀಡಿ ಕೈ ತೊಳೆದುಕೊಂಡು ಲಕ್ಷಾಂತರ ಬಿಲ್ ಪಾವತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದವು. ಅಲ್ಲದೆ ಕ್ಯಾಂಟೀನ್ ಅವ್ಯವಸ್ಥೆಯಿಂದ ಕೂಡಿತ್ತು.
ಗುರುವಾರ ಬೆಳಗ್ಗೆ ಪಪಂ ಪ್ರಭಾರಿ ಮುಖ್ಯಾಧಿಕಾರಿ ರಾಜಶೇಖರ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸಚಿವರ ಆಪ್ತ ಸಹಾಯಕ ವೆಂಕಟೇಶ ಭೇಟಿ ನೀಡಿ ಪರಿಶೀಲಿಸಿದಾಗ, ಶೌಚಗೃಹದ ಡೋರ್ ಕಿತ್ತಿರುವುದಲ್ಲದೇ, ಬಯಲಲ್ಲೇ ಸೌದೇ ಇಟ್ಟು ಅಡುಗೆ ಮಾಡಲಾಗಿತ್ತು. ರೊಟ್ಟಿ, ಚಪಾತಿಯಿಲ್ಲದೆ ಅನ್ನ ಸಾಂಬಾರ್ ಮಾತ್ರವಿದ್ದು, ಅದನ್ನೇ ಸವಿದರು. 
ಕುಡಿವ ನೀರು ಸಹ ಇಲ್ಲದಿರುವುದು, ಕಳಪೆ ಮಟ್ಟದ ಅಕ್ಕಿ ಕಂಡು ಪಪಂ ಉಪಾಧ್ಯಕ್ಷ ಕಂಠಿರಂಗ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಕ್ಯಾಂಟೀನ್‌ನಲ್ಲಿ ಆಕಳೊಂದು ಓಡಾಡುತ್ತಿರುವುದು ನಿರ್ವಹಣೆಗೆ ಹಿಡಿದ ಸಾಕ್ಷಿಯಾಯಿತು.
ಸಿಬ್ಬಂದಿ ಹಾರಿಕೆ ಉತ್ತರ ನೀಡುವುದು ಕಂಡು ಬಂತು. ಆಪ್ತ ಸಹಾಯಕ ವೆಂಕಟೇಶ ನಿರ್ವಹಣೆ ಹೊತ್ತವರಿಗೆ ಕರೆ ಮಾಡಿ, ಕ್ಯಾಂಟೀನ್ ಸರಿಪಡಿಸಿಕೊಳ್ಳಬೇಕು. ವ್ಯವಸ್ಥಿತವಾಗಿ ಊಟ, ಉಪಾಹಾರ ನೀಡಬೇಕು ಎಂದು ತಿಳಿಸಿದರು. ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ರಾಜಶೇಖರ ಸಿಬ್ಬಂದಿಗೆ ಸೂಚಿಸಿದರು.