1. ಗಂಗಾವತಿ ರಾಯಚೂರು ರಸ್ತೆಯ ಚರ್ಚ್ ಹಿಂಭಾಗದ ಮೊಬೈಲ್ ಟವರ್ ಏರಿ ಕುಳಿತಿರುವ ಹಣವಾಳದ ರಾಜು. 2. ಮೊಬೈಲ್ ಟವರ್ ಏರಿ ಕುಳಿತಿರುವ ಯುವಕನ ನೋಡಲು ಬಂದ ಜನರನ್ನು ಚದುರಿಲಸು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.  
ಕೊಪ್ಪಳ

ಪ್ರೀತಿಸಿದವಳಿಗಾಗಿ ಟವರ್ ಏರಿ ಹುಚ್ಚಾಟ

ಪ್ರಮುಖ ಮುಖ್ಯಾಂಶಗಳು

  • ಹಣವಾಳದ ರಾಜು ರಾದ್ಧಾಂತ
  • ಗಂಗಾವತಿ ಜನಜಂಗುಳಿಯಿಂದ ಸಂಚಾರ ಸಿಕ್ಕು
ಗಂಗಾವತಿ: ಪ್ರೀತಿಸಿದ ಯುವತಿಯೊಂದಿಗೆ ಮಾತನಾಡಿಸಲು ಒತ್ತಾಯಿಸಿ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಭಾನುವಾರ ಟವರ್ ಏರಿ ರಾದ್ಧಾಂತ ಸೃಷ್ಟಿಸಿದ್ದ ಯುವಕ ಸೋಮವಾರ ನಗರದಲ್ಲೂ ರಾಯಚೂರು ರಸ್ತೆಯ ಚರ್ಚ್ ಹಿಂಭಾಗದ ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದನು.
ಹಣವಾಳ ಗ್ರಾಮದ ರಾಜು ಮೊಬೈಲ್ ಟವರ್ ಏರಿ ರಾದ್ಧಾಂತ ಸೃಷ್ಟಿಸಿದ್ದು, ಕೆಳಗಿಳಿಸಲು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ರಾಯಚೂರು ಜಿಲ್ಲೆ ದೇವದುರ್ಗ ಮೂಲದ ಯುವತಿಯನ್ನು ರಾಜು ಪ್ರೀತಿಸಿದ್ದಾನೆ. ಆದರೆ, ಯುವತಿ ಈತನ್ನೊಂದಿಗೆ ಬರಲು ನಿರಾಕರಿಸಿದ್ದಳು. ಹೀಗಾಗಿ ಭಾನುವಾರ ದೇವದುರ್ಗಕ್ಕೆ ಹೋಗಿ ಟವರ್ ಏರಿ ರಾದ್ಧಾಂತ ಮಾಡಿದ್ದ. ಪೊಲೀಸರು ಯುವತಿಯನ್ನು ಕರೆಸಿ ಮಾತನಾಡಿಸಿದ ನಂತರ ಕೆಳಗಿಳಿದಿದ್ದ. ಪೊಲೀಸ್ ವಿಚಾರಣೆ ನಂತರ ರಾಜುನನ್ನು ಬಿಡಲಾಗಿತ್ತು. ಸೋಮವಾರ ಹಣವಾಳಗೆ ವಾಪಾಸ್ಸಾದ ರಾಜು ನಗರದಲ್ಲಿ ಟವರ್ ಏರಿ ಯುವತಿಯೊಂದಿಗೆ ಮಾತನಾಡಿಸಬೇಕೆಂದು ಒತ್ತಾಯಿಸಿದ್ದಾನೆ. ಆದರೆ, ಯುವತಿ ಮೊಬೈಲ್ ಸ್ವಿಚ್ ಆ್ ಆಗಿದೆ. ಸ್ಥಳಕ್ಕೆ ಯುವಕನ ತಾಯಿ ನಿಂಗಮ್ಮ, ಸಹೋದರ ಹನುಮಂತಪ್ಪನನ್ನು ಕರೆಸಿದರೂ ಕೆಳಗಿಳಿಯದೆ ಮಿನಿಸ್ಟರ್, ಎಂಎಲ್‌ಎ, ಎಸ್ಪಿ ಬಂದು ಭರವಸೆ ನೀಡಿದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಹುಚ್ಚಾಟ ಪ್ರದರ್ಶಿಸಿದ್ದಾನೆ.ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ನಗರ ಪಿಐ ಪ್ರಕಾಶ ಆರ್. ಯಾತ್ನಾಳ್,‘ನೀನು ಕೆಳಗಿಳಿದ್ರೇ ನೀ ಹೇಳಿದಂಗೆ ಕೇಳ್ತೀವೀ’ ಎಂದು ಮನವೊಲಿಸಿ ಕೆಳಗಿಳಿಸಿದರು. ನಗರ ಠಾಣೆಯಲ್ಲಿ ಯುವಕನ್ನು ವಿಚಾರಣೆಗೊಳಪಡಿಸಿದ್ದು, ಕುಟುಂಬ ಸದಸ್ಯರ ಹೇಳಿಕೆ ಪಡೆಯಲಾಗಿದೆ.ನಂತರ ನಗರ ಪಿಐ ಪ್ರಕಾಶ ಆರ್.ಯಾತನೂರು ನೇತೃತ್ವದ ಪೊಲೀಸರು ಮನವೊಲಿಸಿ ಇಳಿಸಿ ವಿಚಾರಣೆ ನಡೆಸಿದರು.
ಸಂಚಾರ ಸಿಕ್ಕು: ಯುವಕ ಟವರ್ ಏರಿದ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಜನಜಂಗುಳಿ ಸೇರಿತ್ತು. ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿರುವುದು ಕಂಡುಬಂತು. ಇದರಿಂದ ಕೊಪ್ಪಳ ಮತ್ತು ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಿಕ್ಕು (ಟ್ರಾಫಿಕ್ ಜಾಮ್) ಉಂಟಾಯಿತು. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.