ಕೊಪ್ಪಳದಲ್ಲಿ ಶುಕ್ರವಾರ ಶಾಸಕ ಜನಾರ್ದನರೆಡ್ಡಿ ಅಧ್ಯಕ್ಷತೆಯಲ್ಲಿ ಗಂಗಾವತಿ ತಾಪಂ ತೆಮಾಸಿಕ ಕೆಡಿಪಿ ಸಭೆ ನಡೆಯಿತು. ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್​ ಕಾಂಬ್ಳೆ, ತಹಸೀಲ್ದಾರರಾದ ವಸಂತಕುಮಾರಿ, ಬಸವರಾಜ ತೆನ್ನಳ್ಳಿ, ತಾಪಂ ಇಒಗಳಾದ ರಾಮರಡ್ಡಿ ಪಾಟೀಲ್​, ದುಂಡಪ್ಪ ತುರಾದಿ ಇದ್ದರು.  
ಕೊಪ್ಪಳ

ಸರ್ಕಾರಿ ವಸತಿ ಗೃಹ ತೆರವುಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಜನಾರ್ದನ ರೆಡ್ಡಿ ತಾಕೀತು
  • ಗಂಗಾವತಿ ತಾಪಂ ಕೆಡಿಪಿ ಸಭೆ
ಕೊಪ್ಪಳ : ವಡ್ಡರಹಟ್ಟಿ ನೀರಾವರಿ ವಿಭಾಗ ವ್ಯಾಪ್ತಿ 108 ಎಕರೆ ಸರ್ಕಾರಿ ಭೂಮಿ ಕಂಡವರ ಪಾಲಾಗಿದೆ. ಅಧಿಕಾರಗಳಿ ಕಣ್ಮುಚ್ಚಿ ಕುಳಿತಿದ್ದೀರಿ. ಸರ್ಕಾರಿ ವಸತಿ ಗೃಹಗಳಲ್ಲಿ ಅನಧಿಕೃತ ವಾಸ ಇರುವವರನ್ನು ತಕ್ಷಣ ಖಾಲಿ ಮಾಡಿಸುವಂತೆ ಗಂಗಾವತಿ ಶಾಸಕ ಗಾಲಿಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಂಗಾವತಿ ತಾಲೂಕು ತೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮೂರು ವರ್ಷದಿಂದ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಸೂಕ್ತ ದಾಖಲೆ ಇಲ್ಲ ಎನ್ನುತ್ತೀರಿ. ಸರ್ಕಾರಿ ಭೂಮಿ ಬಗ್ಗೆ ಇಷ್ಟೊಂದು ತಾತ್ಸಾರವೇ ? ಎಂದು ರೆಡ್ಡಿ ಗರಂ ಆದರು. ಉತ್ತರಿಸಿದ ಅಧಿಕಾರಿಗಳು ಖಾಸ್ರ ಪಹಣಿ ಇದ್ದು ಹೆಚ್ಚಿನ ದಾಖಲೆಗಳಿಲ್ಲ. ವಸತಿಗೃಹಗಳಲ್ಲಿ ಅನಧಿಕೃತ ವಾಸ ಆಗಿರವವರನ್ನು ತೆರವು ಮಾಡಿಸಲಾಗುವುದು. ವಿದ್ಯುತ್​ ಸಂಪರ್ಕ ಕಡಿತ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ತಕ್ಷಣ ಸರ್ವೇ ನಡೆಸಿ ಪಹಣಿ ಸೃಜಿಸಿ. ಸರ್ಕಾರಿ ಜಾಗದಲ್ಲಿ ಅತಿಕ್ರಮವಾಗಿ ವಾಸವಾಗಿರುವವರಿಗೆ ಒಂದು ವಾರ ಸಮಯ ಕೊಟ್ಟು ಪೊಲೀಸರೊಂದಿಗೆ ತೆರಳಿ ತೆರವು ಮಾಡಿಸಿ. ಪ್ರಕರಣ ದಾಖಲಿಸಿ. ಜುಲೈ 1ರಂದು ನಾನು ಅಲ್ಲಿಗೆ ಬರುವೆ. ಅಷ್ಟರಲ್ಲಿ ಕೆಲಸ ಮುಗಿಸಿರಬೇಕೆಂದು ಅಧ್ಯಕ್ಷರು ಖಡಕ್​ ಎಚ್ಚರಿಕೆ ನೀಡಿದರು.
ಕಿನ್ನಾಳ ಸೇರಿ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಿ ಹಲವು ತಿಂಗಳು ಕಳೆದಿವೆ. ಈವರೆಗೂ ವಿದ್ಯುತ್​ ಸಂಪರ್ಕ ನೀಡಿಲ್ಲ. ನಾನು ಹೇಳಿದ ನಂತರವೂ ಕ್ರಮವಾಗಿಲ್ಲವೆಂದು ರೆಡ್ಡಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಎಇಇ ಯೂನಸ್​ ಉತ್ತರಿಸಿ, ಅನುಮತಿ ಪಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಾನು ತಿಳಿಸಿದ್ದೆ. ಅವರು ಸ್ಪಂದಿಸಿಲ್ಲವೆಂದರು. ಮಾನವೀಯತೆ ಆಧಾರದಲ್ಲಿ ಕೆಲಸ ಮಾಡಿ. ಕಿನ್ನಾಳ ಗ್ರಾಪಂ ಸದಸ್ಯೆ ಕಮಲಮ್ಮ ಕೆಲಸ ಆಗಿಲ್ಲವೆಂದು ಬಳ್ಳಾರಿವರೆಗೆ ನನ್ನನ್ನು ಹುಡುಕಿಕೊಂಡು 3 ಬಾರಿ ಬಂದಿದ್ದಾಳೆ. ಅವರ ಕಾಳಜಿ ಮೆಚ್ಚುವಂಥದ್ದು. ನೀವು ಜನಪರವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸಲಹೆ ನೀಡಿದರು.
ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್​ ಕಾಂಬ್ಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ವೆಂಕಟೇಶ, ತಹಸೀಲ್ದಾರರಾದ ವಸಂತಕುಮಾರಿ, ಬಸವರಾಜ ತೆನ್ನಳ್ಳಿ, ತಾಪಂ ಇಒಗಳಾದ ರಾಮರಡ್ಡಿ ಪಾಟೀಲ್​, ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಇದ್ದರು.

ಪೇಮೆಂಟ್​ ಆದ್ರೆ ಪೋಸ್ಟಿಂಗ್​

ಈ ಸರ್ಕಾರದಲ್ಲಿ ಪೇಮೆಂಟ್​ ಮಾಡಿದವರಿಗೆ ಪೋಸ್ಟಿಂಗ್​ ಆಗುತ್ತಿವೆ. ಅದು ಅಧಿಕಾರಿಗಳ ತಪ್ಪಲ್ಲ. ರಾಜಕೀಯ ಒತ್ತಡ ನಿಮ್ಮ ಮೇಲಿದೆ. ನಾನೇ ಹಲವು ಬಾರಿ ನನ್ನ ಕ್ಷೇತ್ರದ ಹಲವು ರಸ್ತೆಯಲ್ಲಿ ಬರುವಾಗ ಕೆಲವರು ಕುಡಿದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಲಗಿದ್ದರು. ಇಂಥ ಘಟನೆ ಅಗಬಾರದು. ನಾನೂ ಕಾನಿಸ್ಟೇಬಲ್​ ಮಗ. ನಮ್ಮ ತಂದೆ 35 ವರ್ಷ ಸೇವೆ ಮಾಡಿದ್ದಾರೆ. ಆಗಿನ ಪೊಲೀಸ್​ ವ್ಯವಸ್ಥೆ ಬೇರೆ. ಈಗಿನ ವ್ಯವಸ್ಥೆ ಬೇರೆ. ಎಸ್ಪಿ ಮೇಲೆ ನನಗೆ ವಿಶ್ವಾಸ ಹೋಗಿದೆ. ನೀವಾದ್ರು ಮಾಡಿ. ಇಲ್ಲದಿದ್ದರೆ ನಾನೇ ರೆಡ್​ ಹ್ಯಾಂಡೆಡ್​ ಆಗಿ ಹಿಡಿಯುವೆ. ಆಗ ನಿಮ್ಮ ಕೆಲಸ ಕಳೆದುಕೊಳ್ಳಬೇಡಿ ಎಂದು ರೆಡ್ಡಿ ಪೊಲೀಸರನ್ನು ಎಚ್ಚರಿಸಿದರು.

ಜನರಿಂದಲೇ ಸಮಸ್ಯೆಗಳ ಅನಾವರಣ

ಸಭೆಯಲ್ಲಿ ಇರಕಲ್​ ಗಡಾ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ವಿರುದ್ಧ ಕ್ರಮಕ್ಕೆ ಅಬಕಾರಿ, ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದರು. ಉತ್ತರಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು ನಿಯಂತ್ರಣ ಮಾಡಿದ ಬಗ್ಗೆ ಸಮರ್ಥಿಸಿಕೊಂಡರು. ಸಭೆಗೆ ಆ ಭಾಗದ ಜನರನ್ನು ಆಹ್ವಾನಿಸಿದ್ದ ರೆಡ್ಡಿ, ಅವರಿಂದಲೇ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿ ಅಧಿಕಾರಿಗಳನ್ನು ಮೌನವಾಗಿಸಿದರು. ಬುಡಶೆಟ್ನಾಳ ಗ್ರಾಮದಲ್ಲಿ ನೀರಾವರಿ ಇಲಾಖೆ ಜಾಗದಲ್ಲಿ ಅಕ್ರಮ ಮರಂ ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲವೆಂದು ಗ್ರಾಮಸ್ಥರು ದೂರಿದರು. ತಕ್ಷಣ ಅರಣ್ಯ, ಕಂದಾಯ, ಸಣ್ಣ ನೀರಾವರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗುವವರೂ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ರೆಡ್ಡಿ ತಾಕೀತು ಮಾಡಿದರು.
"

ಮುಂಗಾರು ಆರಂಭವಾಗಿದ್ದು ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ. ಆನೆಗೊಂದಿ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ನೇಮಿಸಿ. ನಾಗೇಶನಳ್ಳಿ ಭಾಗದಲ್ಲಿ ರಸ್ತೆ ಸಮಸ್ಯೆ ಸರಿಪಡಿಸಿ. ಶಾಲೆ ಮರು ಆರಂಭವಾಗಿದ್ದು ಶಿಥಿಲ ಕೊಠಡಿಗಳನ್ನು ಸರಿಪಡಿಸಿ ಉತ್ತಮ ವಾತಾವರಣ ನಿರ್ಮಿಸಿ.

— ಗಾಲಿ ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.