ಗಂಗಾವತಿ ವಾಲ್ಮೀಕಿ ವೃತ್ತದಲ್ಲಿದ್ದ ಕಸ ಸಂಗ್ರಹ ಪ್ರದೇಶದಲ್ಲಿ ನಗರಸಭೆಯಿಂದ ಕೈಗೊಂಡ ಸ್ವಚ್ಛತಾಲಂಕಾರ ಕಾಮಗಾರಿಯನ್ನು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ನೇತೃತ್ವದ ಜಿಲ್ಲಾಡಳಿತ ತಂಡ ಪರಿಶೀಲಿಸಿತು. ಎಇಇ ಶರಣಪ್ಪ ನಾಯ್ಕ, ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಇತರರಿದ್ದರು.
- ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ಹೇಳಿಕೆ
ಗಂಗಾವತಿ: ನಗರದ ವಾಲ್ಮೀಕಿ ವೃತ್ತದಲ್ಲಿನ ಕಸ ಸಂಗ್ರಹ ಪ್ರದೇಶದಲ್ಲಿ ನಗರಸಭೆಯಿಂದ ಸ್ವಚ್ಛತಾಲಂಕಾರ ಕಾಮಗಾರಿ ನಿರ್ವಹಿಸಿದ್ದು, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ನೇತೃತ್ವದ ಜಿಲ್ಲಾಡಳಿತದ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹ ನಿಷೇಧಿಸಿದ್ದರೂ, ಕೆಲವೆಡೆ ಕಸ ಹಾಕಲಾಗುತ್ತಿದೆ. ಒಣ ಮತ್ತು ಹಸಿ ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತ್ಯಾಜ್ಯ ಹಾಕುವ ಕುರಿತು ಜಾಗೃತಿ ಮೂಡಿಸಲು 19 ಸಮುದಾಯ ಸಂಯೋಜಕರನ್ನು ಇತ್ತೀಚೆಗೆ ನಿಯೋಜಿಸಲಾಗಿದೆ. ಕಸ ಸಂಗ್ರಹ ಪ್ರದೇಶದಲ್ಲಿ ಸ್ವಚ್ಛತಾಲಂಕಾರ ಕಾಮಗಾರಿ ನಿರ್ವಹಿಸುವ ಕ್ರಿಯಾತ್ಮಕ ಟಾಸ್ಕ್ ನೀಡಿದ್ದು, ಈಗಾಗಲೇ 10 ಪ್ರದೇಶದಲ್ಲಿ ನಿರ್ವಹಿಸಲಾಗಿದೆ.
ವಾಲ್ಮೀಕಿ ವೃತ್ತದಲ್ಲಿದ್ದ ತ್ಯಾಜ್ಯ ಸಂಗ್ರಹ ಪ್ರದೇಶ ಬದಲಾಗಿದ್ದನ್ನು ಪರಿಶೀಲಿಸಿದ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ಮೆಚ್ಚುಗೆ ವ್ಯಕ್ತಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 18 ತ್ಯಾಜ್ಯ ಸಂಗ್ರಹಿತ ಪ್ರದೇಶ ಗುರುತಿಸಿದ್ದು, 10 ಸ್ಥಳಗಳಲ್ಲಿ ಅಲಂಕಾರಗೊಳಿಸಲಾಗಿದೆ. ಜಾಗೃತಿ ಮೂಡಿಸುವುದರ ಜತೆಗೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ನೈರ್ಮಲ್ಯ ಸಿಬ್ಬಂದಿ ನಿಗಾವಹಿಸಲಿದ್ದಾರೆ. ತ್ಯಾಜ್ಯ ಹಾಕುವರಿಗೆ ದಂಡ ವಿಧಿಸುವುದರ ಜತೆಗೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದರು.
ನಗರಾಭಿವೃದ್ಧಿ ಕೋಶದ ಎಇಇ ಶರಣಪ್ಪ ನಾಯ್ಕ, ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ, ಆರೋಗ್ಯ ನಿರೀಕ್ಷ ಎ.ನಾಗರಾಜ್, ನೈರ್ಮಲ್ಯ ನಿರೀಕ್ಷಕರಾದ ಶೋಭಾ ಅಂಗಡಿ, ರಾಧಿಕಾ ಇದ್ದರು.