ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಜನಜಾಗೃತಿ ರಥಯಾತ್ರೆಯನ್ನು ಗುರುವಾರ ಸ್ವಾಗತಿಸಲಾಯಿತು. ಪ್ರಮುಖರಾದ ಎಚ್.ಈಶಪ್ಪ, ಮೌನೇಶ ದಢೇಸುಗೂರು, ಪ್ರಭುರಾಜ ಬೂದಿ ಇತರರಿದ್ದರು.
- ಅಭಿಯಾನದ ತಾಲೂಕು ಸಂಚಾಲಕ ಪ್ರಭು ಉಪನಾಳ ಹೇಳಿಕೆ
ಕಾರಟಗಿ: ಲಕ್ಷಾಂತರ ಜೀವಿಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಯಾನದ ತಾಲೂಕು ಸಂಚಾಲಕ ಪ್ರಭು ಉಪನಾಳ ಹೇಳಿದರು.
ಪಟ್ಟಣಕ್ಕೆ ಡಿ.27ರಂದು ಆಗಮಿಸಲಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಕುರಿತ ಪೂರ್ವಭಾವಿ ಜನಜಾಗೃತಿ ರಥಯಾತ್ರೆಯನ್ನು ಪಟ್ಟಣಕ್ಕೆ ಗುರುವಾರ ಸ್ವಾಗತಿಸಿಕೊಂಡು ಮಾತನಾಡಿದರು.
ತುಂಗಭದ್ರಾ ಜಲಾಶಯವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಾಡಿಕೊಂಡು ಹೋಗಬೇಕಿದೆ. ಜಲಾಶಯ ಜತೆಗೆ ಜನರ, ಲಕ್ಷಾಂತರ ಜೀವರಾಶಿಗಳ ಬದುಕಿನ ಪ್ರಶ್ನೆ ಎದುರಾಗಿದೆ. ಹೀಗಾಗಿ ನದಿಯ ಮೌಲ್ಯ ಹಾಗೂ ಸಂರಕ್ಷಣೆ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಜವಾಬ್ದಾರಿಯಿದ್ದು ಸಂಘಟಿತರಾಗಿ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಡಿ.27ರಿಂದ ಕಿಷ್ಕಿಂಧಾದಿಂದ ಮಂತ್ರಾಲಯದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಅಭಿಯಾನವು ಡಿ.27ರಂದು ರಾತ್ರಿ ಪಟ್ಟಣಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಡಿ.28ರಂದು ಬೆಳಗ್ಗೆ ಸಾರ್ವಜನಿಕ ಸಭೆ ನಡೆಸಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಮಾತನಾಡಿ, ಸಾರ್ವಜನಿಕ ಸಂಪತ್ತುಗಳನ್ನು ಸಂರಕ್ಷಿಸುವಲ್ಲಿ ಆಡಳಿತ ವರ್ಗಗಳ ಜತೆಗೆ ಸಾಮುದಾಯಿಕ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿ ಅರಿತು ಸಾಂವಿಧಾನಿಕ ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳುವ ಜತೆಗೆ ಪರಿಸರ ಸ್ನೇಹಿ ನಡೆಗಳ ಮೂಲಕ ಭವಿಷ್ಯದ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದರು.
ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಈಶಪ್ಪ, ಸದಸ್ಯ ಹಿರೇಬಸಪ್ಪ ಸಜ್ಜನ್, ನಾಮನಿರ್ದೇಶಿತ ಸದಸ್ಯ ವೀರೇಶ ಮುದಗಲ್, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಪ್ರಮುಖರಾದ ದೇವರಾಜ ನಾಯಕ, ರಾಜಶೇಖರ ಆನೆಹೊಸೂರು, ಪ್ರಹ್ಲಾದ್ ಜೋಷಿ, ರುದ್ರೇಶ ಮಂಗಳೂರು, ಅಯ್ಯಪ್ಪ ಉಪ್ಪಾರ್ ಇತರರಿದ್ದರು.