ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಬಿಇಒ ಅಶೋಕಗೌಡ ಉದ್ಘಾಟಿಸಿದರು. ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ, ಸ.ನೌ.ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಇತರರಿದ್ದರು.  
ಕೊಪ್ಪಳ

ಮಕ್ಕಳ ಅಭಿವೃದ್ಧಿ ಮೊದಲ ಆದ್ಯತೆಯಾಗಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಬಿಇಒ ಅಶೋಕಗೌಡ ಸಲಹೆ
  • ಯಲಬುರ್ಗಾ ಶಿಕ್ಷಕರ ಸಂಘದ ಪದಗ್ರಹಣ
ಯಲಬುರ್ಗಾ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಹಿತಾಸಕ್ತಿಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸದಾ ಬೆನ್ನೆಲುಬಾಗಿ ನಿಂತಿದೆ ಎಂದು ಬಿಇಒ ಅಶೋಕಗೌಡ ಹೇಳಿದರು.
ಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘವನ್ನು ಅವಿರೋಧವಾಗಿ ರಚಿಸಿರುವುದು ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಆನ್‌ಲೈನ್ ವ್ಯವಸ್ಥೆಗಳ ಒತ್ತಡದ ನಡುವೆ ಕಾರ್ಯನಿರ್ವಹಿಸುವ ಪರಿಸ್ಥಿತಿಯಿದ್ದು, ಹೆಚ್ಚುವರಿ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ. ಅದಾಗ್ಯೂ ಶಾಲೆ, ಶಿಕ್ಷಣ ಹಾಗೂ ಮಕ್ಕಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ, ಬಳಿಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ ಮಾತನಾಡಿ, ಶಿಕ್ಷಕರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘವು ನಿರಂತರ ಪ್ರಯತ್ನ ಮಾಡುತ್ತಿದೆ. ಶಿಕ್ಷಕರ ಹಕ್ಕುಗಳ ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ಸಂಘದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ ಮಾತನಾಡಿ, ಶಿಕ್ಷಕರು ಮತ್ತು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಹಿತಾಸಕ್ತಿಗಾಗಿ ಸದಾ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ನಿವೃತ್ತ ಡಿಡಿಪಿಐ ಎಸ್.ಡಿ.ಗಾಂಜಿ ಮತನಾಡಿದರು. ಸ.ನೌ.ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪದಾಧಿಕಾರಿಗಳಾದ ಮಂಜುನಾಥ ಕುರಿ, ಮಲ್ಲನಗೌಡ ಕೋನನಗೌಡ್ರ, ಶರಣಯ್ಯ ಸರಗಣಚಾರ, ಎಂ.ಎನ್.ಜನಾದ್ರಿ, ಮರ್ದಾನಸಾಬ ಕುಕನೂರು, ಮಾರುತಿ ತಳವಾರ, ಶಿವಪ್ಪ ಕೊಂಡಗುರಿ, ಶಿವಾನಂದ ಮಳಗಿ, ರಾಮಣ್ಣ ತಳವಾರ, ವೀರಭದ್ರಪ್ಪ ಅಂಗಡಿ, ಬಸಮ್ಮ ಛಲವಾದಿ, ಮೈಹಬೂಬ ಬಾದಶಾಹ, ಸಂಗಯ್ಯ ಹಿರೇಮಠ, ದೇವಿಂದ್ರಪ್ಪ ಅಂಗಡಿ, ಗಂಗಮ್ಮ ಸೋಮಬಗಿ, ನಾಗರಾಜ ನಡೂಲಕೇರಿ, ವಿದ್ಯಾಶ್ರೀ ಕುಡಗುಂಟಿ, ಮಂಜುನಾಥ ಮುರುಡಿ, ಶ್ರುತಿ ಇತರರಿದ್ದರು.