ಅಪರ ಆಯುಕ್ತರು ಡಿಡಿಪಿಐಗೆ ಬರೆದ ಪತ್ರ.
- * ನ್ಯಾಯಾಲಯ ಮೂಲಕ ಐಚ್ಛಿಕ ವಿಷಯ ಉಳಿಸಿಕೊಂಡ ಆದರ್ಶ ಶಾಲೆ ವಿದ್ಯಾರ್ಥಿಗಳು
- * ಕನಕಗಿರಿ ಶಾಲೆ ಮಕ್ಕಳ ಕೆಲಸಕ್ಕೆ ಜನ ಮೆಚ್ಚುಗೆ
- * 13 ವಿದ್ಯಾರ್ಥಿಗಳಿಗೆ ಐಟಿ ವಿಷಯದಲ್ಲಿ ಮುಂದುವರಿಯಲು ಅವಕಾಶ
ತಾವು ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯಕ್ಕೆ ಶಿಕ್ಷಕರು, ಪಠ್ಯ ಪುಸ್ತಕ ದೊರೆಯದೇ ಅರ್ಧ ಶೈಕ್ಷಣಿಕ ವರ್ಷವನ್ನು ಅತಂತ್ರ ಸ್ಥಿತಿಯಲ್ಲಿ ಕಳೆದ ಇಲ್ಲಿನ ಆದರ್ಶ ಶಾಲೆಯ ಎನ್‌ಎಸ್‌ಕ್ಯೂಎಫ್ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕೋರ್ಟ್ ಮೂಲಕ ನ್ಯಾಯ ಪಡೆದುಕೊಂಡಿದ್ದಾರೆ.
ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಕೌಶಲಾಧಾರಿತ ಸಾಮರ್ಥ್ಯ ಚಟುವಟಿಕೆಯನ್ನು ಅಳವಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಆದೇಶಿಸಿತ್ತು. ಅದರಂತೆ ಇಲ್ಲಿನ ಆದರ್ಶ ಶಾಲೆಯ 9ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಗೆ (ಪ್ರಸ್ತುತ 10ನೇ ತರಗತಿಯಲ್ಲಿರುವ) ತೃತೀಯ ಭಾಷೆ ಹಿಂದಿ ಬದಲಾಗಿ ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು) ನಡಿ ಇನ್‌ಫಾರ್ಮೇಷನ್ ಟೆಕ್ನಾಲಜಿ (ಐಟಿ) ವಿಷಯ ತೆಗೆದುಕೊಳ್ಳುವಂತೆ ಶಾಲೆಯ ಶಿಕ್ಷಕರು ಮನವೊಲಿಸಿದ್ದರು.
ಇದರಿಂದ 42 ವಿದ್ಯಾರ್ಥಿಗಳು ಐಟಿ ವಿಷಯ ತೆಗೆದುಕೊಂಡಿದ್ದರು. ಆಗಲೇ ಶಿಕ್ಷಕರು ಹಾಗೂ ಪಠ್ಯವಿಲ್ಲದೇ ತೊಂದರೆ ಅನುಭವಿಸಿದ್ದರೂ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು. ಶಿಕ್ಷಕರು, ಪಠ್ಯ ರಾಜ್ಯ ಮಟ್ಟದ ಸಮಸ್ಯೆಯಾಗಿದೆ ಎನ್ನುವ ಮಾತುಗಳಿದ್ದವು. ಇದರಿಂದ 5 ವಿದ್ಯಾರ್ಥಿಗಳು ಹಿಂದಿ ತೆಗೆದುಕೊಂಡಿದ್ದರು. ಆದರೆ, ಇದೀಗ 10ನೇ ತರಗತಿಯಲ್ಲಿರುವ 37 ವಿದ್ಯಾರ್ಥಿಗಳಿಗೆ ಕಳೆದ ವರ್ಷದಂತೆ ಐಟಿ ವಿಷಯ ಬೋಧನೆಗೆ ಶಿಕ್ಷಕರು, ಪಠ್ಯ ಒದಗಿಸುವ ಭರವಸೆ ಶಾಲೆಯ ಮುಖ್ಯ ಶಿಕ್ಷಕರಿಂದ ದೊರೆಯಲಿಲ್ಲ.
ಈ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆಯಿರಲಿಲ್ಲ. ಬಂದ ದಾರಿಗೆ ಸುಂಕ ಇಲ್ಲವೆನ್ನುವಂತೆ ಮಕ್ಕಳನ್ನು ಪುನಃ ತೃತೀಯ ಭಾಷೆ ಹಿಂದಿ ಆಯ್ಕೆ ಮಾಡಿಕೊಳ್ಳುವಂತೆ ಶಿಕ್ಷಕರು, ಅಧಿಕಾರಿಗಳು ಮನವೊಲಿಸುವ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಬೇಸತ್ತಿದ್ದರು. ಸಚಿವ ಶಿವರಾಜ ತಂಗಡಗಿ ಬಳಿಯೂ ತಮ್ಮ ಸಂಕಷ್ಟ ತಿಳಿಸುವ ಪ್ರಯತ್ನ ಮಾಡಿದಾಗ ಅವರಿಂದಲೂ ರಾಜ್ಯ ಮಟ್ಟದ ಸಮಸ್ಯೆ ಎನ್ನುವ ಉತ್ತರ ಬಂದಿತೇ ಹೊರೆತು ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಸಿಗದೇ ಅತಂತ್ರ ಸ್ಥಿತಿಗೆ ತಲುಪಿದ್ದರು.
ಕೊನೆಗೆ ನ್ಯಾಯಾಲಯವೇ ನಮಗೆ ದಾರಿ ಎಂದು ಅರಿತ ವಿದ್ಯಾರ್ಥಿಗಳು, ತಮ್ಮ ಸಮಸ್ಯೆ ಇತ್ಯರ್ಥಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. 13 ವಿದ್ಯಾರ್ಥಿಗಳು ಧಾರವಾಢ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಮಧ್ಯಂತರ ವರದಿಯಲ್ಲಿ 9ನೇ ತರಗತಿಯಲ್ಲಿ ತೆಗೆದುಕೊಂಡ ವಿಷಯವನ್ನೇ 10ನೇ ತರಗತಿಯಲ್ಲಿ ಮುಂದುವರಿಸುವಂತೆ ಸೂಚಿಸಿದೆ. ಅರ್ಧ ಶೈಕ್ಷಣಿಕ ವರ್ಷ ಪೂರೈಸಿರುವ ವಿದ್ಯಾರ್ಥಿಗಳಿಗೆ ಕೊನೆಗೆ ನ್ಯಾಯಾಲಯವೇ ಸಮಾಧಾನವಾಗುವ ಮಧ್ಯಂತರ ತೀರ್ಪು ನೀಡಿರುವುದು ಪಾಲಕರಲ್ಲಿ ಸಂತಸ ಮೂಡುವಂತೆ ಮಾಡಿದೆ.
ನ್ಯಾಯಾಲಯದ ಮಧ್ಯಂತರ ಆದೇಶದಂತೆ ಐಟಿ ವಿಷಯ ಮುಂದುವರಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರು ಡಿಡಿಪಿಐಗೆ ಸೂಚಿಸಿದ್ದಾರೆ. ಡಿಡಿಪಿಐರವರು ಕೋರ್ಟ್ ಮಧ್ಯಂತರ ಆದೇಶ ಹಾಗೂ ಮೇಲಧಿಕಾರಿಗಳ ಪತ್ರ ಉಲ್ಲೇಖಿಸಿ ಶಾಲೆಗೆ ಕ್ರಮ ವಹಿಸುವಂತೆ ನೊಟೀಸ್ ನೀಡಿದ್ದಾರೆ.
ಒಟ್ಟು 37 ವಿದ್ಯಾರ್ಥಿಗಳು ಐಟಿ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, 13 ವಿದ್ಯಾರ್ಥಿಗಳು ಮಾತ್ರ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್‌ನ ಆದೇಶದಂತೆ 13 ವಿದ್ಯಾರ್ಥಿಗಳನ್ನು ಮಾತ್ರ ಐಟಿ ವಿಷಯದಲ್ಲಿ ಮುಂದುವರಿಸಲಾಗುತ್ತದೆ. ಉಳಿದವರು ಹಿಂದಿಯಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂದು ಮುಖ್ಯಶಿಕ್ಷಕರು ಹೇಳುತ್ತಿರುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಲಿದೆ.
ನ್ಯಾಯಾಲಯದ ಮೆಟ್ಟಿಲೇರಿದ್ದ 13 ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಎನ್‌ಎಸ್‌ಕ್ಯೂಎಫ್‌ನಡಿ ಐಟಿ ವಿಷಯ ಮುಂದುವರಿಸಲಾಗುತ್ತದೆ. ಅವರಿಗೆ ಶಿಕ್ಷಕರು, ಪಠ್ಯ ಪುಸ್ತಕ ಒದಗಿಸುವ ಭರವಸೆ ಇದೆ.