ಕಾರಟಗಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ಗುರುಸ್ಪಂದನ ಕಾರ್ಯಕ್ರಮದಲ್ಲಿ ಬಿಇಒ ಬಿ. ನಟೇಶ ಮಾತನಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಮರೇಶ ಮೈಲಾಪುರ, ಶಾಲೆಯ ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ, ಇಲಾಖೆಯ ಸೂಪರಿಂಟೆಂಡೆಂಟ್ ಮಂಜುನಾಥ, ಸಂಯೋಜಕರಾದ ರಾಘವೇಂದ್ರ, ಶಶಿಧರ ಸ್ವಾಮಿ ಇತರರಿದ್ದರು. 
ಕೊಪ್ಪಳ

ಸೇವಾ ಪುಸ್ತಕವನ್ನು ಕಾಲಕಾಲಕ್ಕೆ ಪರಿಶೀಲಿಸಿ

ನರೇಶ್ ಕುಮಾರ್

ಕಾರಟಗಿ: ಶಿಕ್ಷಕರ ಸೇವಾ ಪುಸ್ತಕವು ಸಮಗ್ರ ವೃತ್ತಿ ಜೀವನದ ಮಾಹಿತಿ ಒಳಗೊಂಡಿರುವ ಅತ್ಯಮೂಲ್ಯ ದಾಖಲೆಯಾಗಿದೆ ಎಂದು ಗಂಗಾವತಿ ಬಿಇಒ ಬಿ.ನಟೇಶ್ ಹೇಳಿದರು.

ಕೆಪಿಎಸ್ ಶಾಲೆಯಲ್ಲಿ ಶನಿವಾರ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ನೌಕರರು ಸೇವಾ ಪುಸ್ತಕವನ್ನು ಕಾಲಕಾಲಕ್ಕೆ ಪರಿಶೀಲಿಸಿ, ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ನಿವೃತ್ತಿ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಸೇವಾ ಪುಸ್ತಕದಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿ ಹಾಗೂ ದಾಖಲೆಗಳನ್ನು ಸಮರ್ಪಕವಾಗಿ ಮಾಡಿಸಿಕೊಳ್ಳಬೇಕು ಎಂದರು. 
ಶಿಕ್ಷಣ ಇಲಾಖೆಯ ವ್ಯವಸ್ಥಾಪಕ ಶಿವಪ್ರಸಾದ್ ಅವರು, ನೌಕರರ ಸೇವಾ ಪುಸ್ತಕದಲ್ಲಿನ ಸಣ್ಣ ನಿಷ್ಕಾಳಜಿಯೂ ಮುಂದೆ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತರಿಗೆ ತೀವ್ರ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ. ಇಂಥ ಕಾರ್ಯಕ್ರಮಗಳ ಮೂಲಕ ಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ನಾಮಿನಿ ವಿವರ, ವೇತನ ಬಡ್ತಿ, ಇಂಕ್ರಿಮೆಂಟ್, ವರ್ಗಾವಣೆ, ಸೇವಾ ವಿವರ ಸೇರಿದಂತೆ ಸೇವೆಗೆ ಸಂಬಂಧಿಸಿದ ಹಲವು ಮಾಹಿತಿಗಳ ಕುರಿತು ಶಿಕ್ಷಕರಿಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಗುರು ಸ್ಪಂದನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಮರೇಶ ಮೈಲಾಪುರ ಮಾತನಾಡಿ, ಶಿಕ್ಷಕರ ಬಳಿಗೆ ಇಲಾಖೆಯೇ ಆಗಮಿಸಿ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಹಾಗೂ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು. 
ಶಾಲೆಯ ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ, ಇಲಾಖೆಯ ಸೂಪರಿಂಟೆಂಡೆಂಟ್ ಮಂಜುನಾಥ, ಸಂಯೋಜಕರಾದ  ರಾಘವೇಂದ್ರ ಹಾಗೂ ಶಶಿಧರ ಸ್ವಾಮಿ, ವಿಷಯ ನಿರ್ವಾಹಕರಾದ ಪಂಕಜ, ಖಾದರ್ ಬಿ., ಪದ್ಮಾ ಹಾಗೂ ಯಂಕಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ ಸಜ್ಜನ್, ಉಪಾಧ್ಯಕ್ಷ ತಿಮ್ಮಣ್ಣ ನಾಯಕ, ರಾಜಶೇಖರ್ ಸಿರಿವಾರ,  ಶ್ಯಾಮಸುಂದರ ಹಾಗೂ ದೇವೇಂದ್ರ ಇತರರಿದ್ದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿ, ಸೇವಾ ಪುಸ್ತಕ ಹಾಗೂ ಸೇವೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಪರಿಶೀಲಿಸಿಕೊಂಡರು.