ಕೊಪ್ಪಳದಲ್ಲಿ ನಡೆದ ಬಕ್ರಿದ್ ಶಾಂತಿ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಜಿಪಂ ಸಿಇಒ ವರ್ಣಿತ್ ನೇಗಿ, ಎಎಸ್ಪಿ ಆರ್. ಹೇಮಂತಕುಮಾರ, ಎಸಿ ಕ್ಯಾ. ಮಹೇಶ ಇದ್ದರು.
- ಡಿಸಿ ಡಾ.ಸುರೇಶ ಇಟ್ನಾಳ ಮನವಿ
- ಬಕ್ರಿದ್ ಶಾಂತಿ ಸಭೆ
ಕೊಪ್ಪಳ : ಪ್ರತಿಯೊಬ್ಬರಿಗೂ ದೇವರ ಉಪಾಸನೆ ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಆದ್ದರಿಂದ ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಶಾಂತಿ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕು ಎಂದು ಡಿಸಿ ಡಾ. ಸುರೇಶ್ ಬಿ. ಇಟ್ನಾಳ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಬಕ್ರಿದ್ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಜಾನುವಾರು ಸಾಗಣೆ ಸಂಬಂಧಿತ ಪ್ರಕರಣಗಳಲ್ಲಿ ತಪ್ಪು ಕಲ್ಪನೆ ಮಾಡಿಕೊಂಡು ಕಾನೂನು ಕೈಗೆತ್ತಿಕೊಳ್ಳಬಾರದು. ಅಂತಹ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಅಧಿಕಾರಿಗಳೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಹಬ್ಬದ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಕ್ರಿದ್ ಹಬ್ಬ ಸೌಹಾರ್ದಯುತವಾಗಿ ನಡೆಯುತ್ತಿದ್ದು, ಅದೇ ಪರಂಪರೆ ಮುಂದುವರಿಯಬೇಕು. ಯಾವುದೇ ಅನುಮಾನಾಸ್ಪದ ಘಟನೆಗಳು ಕಂಡುಬಂದರೆ ಕೂಡಲೇ 112 ಸಹಾಯವಾಣಿ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ. ಘಟನೆಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಯಮನೂರಪ್ಪ ನಾಯಕ, ಎಸ್.ಬಿ. ಖಾದ್ರಿ ಸೇರಿದಂತೆ ಹಲವರು ಭಾಗವಹಿಸಿ, ಸಾಮೂಹಿಕ ಪ್ರಾರ್ಥನೆ ವೇಳೆ ಶಾಂತಿ ಕಾಪಾಡಲು ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ವರ್ಣಿತ್ ನೇಗಿ, ಎಎಸ್ಪಿ ಆರ್. ಹೇಮಂತಕುಮಾರ, ಎಸಿ ಕ್ಯಾ. ಮಹೇಶ ಮಾಲಗಿತ್ತಿ, ಸೇರಿದಂತೆ ಪೊಲೀಸ್ ಉಪಾಧೀಕ್ಷಕರು, ಸಮಾಜದ ಮುಖಂಡರಿದ್ದರು.