ಕೊಪ್ಪಳದಲ್ಲಿ ವೆಂಕಟೇಶ ಹೆಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೊಪ್ಪಳ: ಅಯೋಧ್ಯೆ ರಾಮ ಮಂದಿರ ಹುಂಡಿ ಲೂಟಿ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಿಬಿಐ ತನಿಖೆಗೆ ಕೊಡಬೇಕೆಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿ ವೆಂಕಟೇಶ ಹೆಗಡೆ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇಶದ ಕೋಟ್ಯಂತರ ಭಕ್ತರು ರಾಮನಿಗೆ ಹಣ, ಬಂಗಾರ, ಬೆಳ್ಳಿ ಸೇರಿ ಬೆಲೆ ಬಾಳುವ ವಸ್ತುಗಳ ದೇಣಿಗೆ ನೀಡಿದ್ದಾರೆ. ಅದರನ್ನು ದುರ್ಬಳಕೆ ಮಾಡಿಕೊಂಡು ಭಕ್ತಗಣಕ್ಕೆ ಅಪಚಾರ ಮಾಡಿದ್ದಾರೆ. ಚುಣಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಮ ಮಂದಿರ ನಿರ್ಮಾಣ ವಿಷಯ ಬಳಕೆ ಮಾಡಿಕೊಂಡಿದ್ದಾರೆ. ಟ್ರಸ್ಟ್ನಲ್ಲೂ ಸಂ ಪರಿವಾರ, ವಿಎಚ್ಪಿ ಸೇರಿ ಇತರ ನಾಯಕರು ಪದಾಧಿಕಾರಿಗಳಾಗಿದ್ದಾರೆ. ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಉತ್ತಮವಾಗಿ ನಡೆಯುತ್ತಿದೆ. ಹೇಗಾದರೂ ಮಾಡಿ ಅದನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಎಲ್ಒಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಬಿಎಲ್ಎಗಳು ಸಹಕಾರ ನೀಡುತ್ತಿದ್ದಾರೆ. ಯಾವೊಬ್ಬ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನಮ್ಮ ಸರ್ಕಾರ ಕ್ರಮವಹಿಸಿದೆ ಎಂದರು.
ಪ್ರಮುಖರಾದ ತೋಟಪ್ಪ ಕಾಮನೂರು, ಶಂಕರಗೌಡ ಪಾಟೀಲ್, ಸೋಮಲಿಂಗಪ್ಪ ಹುಡೆದ್ ಇತರರಿದ್ದರು.