ಗಂಗಾವತಿಯ ಕೊಪ್ಪಳ ರಸ್ತೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ಮಾಜಿ ಶಾಸಕ ಬಸವರಾಜ ದಢೇಸುಗೂರು ಕಾರು ಜಖಂಗೊಂಡಿರುವುದು. 
ಕೊಪ್ಪಳ

ಮಾಜಿ ಶಾಸಕ ದಢೇಸುಗೂರು ಕಾರು ಜಖಂ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ದಢೇಸುಗೂರು ಕಾರನ್ನು ಜಖಂಗೊಳಿಸಿ ಯವಕರ ಗುಂಪು
  • ಜಾಗ ಖರೀದಿಯ ಹಣಕಾಸು ವಿಚಾರವಾಗಿ ಕ್ಯಾತೆ
ಗಂಗಾವತಿ: ಕೊಪ್ಪಳ ರಸ್ತೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ಮಾಜಿ ಶಾಸಕ ಬಸವರಾಜ ದಢೇಸುಗೂರು ಕಾರನ್ನು ಯವಕರ ಗುಂಪು ಮಂಗಳವಾರ ಜಖಂಗೊಳಿಸಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಹೋಟೆಲ್‌ನಲ್ಲಿ ಟೀ ಕುಡಿಯಲು ಮಾಜಿ ಶಾಸಕ ಬಸವರಾಜ ದಢೇಸುಗೂರು ಹೋಗಿದ್ದಾಗ ಯುವಕರು ಗುಂಪು ಏಕಾಏಕಿ ಕಾರನ್ನು ಜಖಂಗೊಳಿಸಿದ್ದಲ್ಲೇ ದಾಂಧಲೆ ಮಾಡಿದ್ದಾರೆ. ಸ್ಥಳೀಯರು ಯುವಕರನ್ನು ತಡೆದಿದ್ದು, ಮಾಹಿತಿ ಅರಿತ ನಗರ ಪಿಐ ಪ್ರಕಾಶ ಆರ್. ಯಾತನೂರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸುದ್ದಿ ಹರಡುತ್ತಿದ್ದಂತೆ ದಢೇಸುಗೂರು ಬೆಂಬಲಿಗರು ಹೋಟೆಲ್ ಬಳಿ ಜಮಾಯಿಸಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
ಹೋಟೆಲ್ ಮುಂದಿನ ಖಾಲಿ ಜಾಗ ಖರೀದಿಯ ಹಣಕಾಸು ವಿಚಾರವಾಗಿ ಕ್ಯಾತೆ ತೆಗೆದುಕೊಂಡ ಗುಂಪು, ಗದ್ದಲ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಶಾಸಕ ಬಸವರಾಜ ದಢೇಸುಗೂರು ಪ್ರತಿಕ್ರಿಯಿಸಿ, ಟೀ ಕುಡಿಯಲು ಒಳಗಡೆ ಹೋಗಿದ್ದಾಗ ಯುವಕರ ಗುಂಪು ತಾವೇ ಜಗಳವಾಡಿಕೊಂಡು ನನ್ನ ಕಾರು ಜಖಂಗೊಳಿಸಿದ್ದು, ಅವರೊಂದಿಗೆ ಯಾವುದೇ ವ್ಯವಹಾರವಿಲ್ಲ. ಹೀಗಾಗಿ ಯಾವುದೇ ದೂರು ನೀಡಿಲ್ಲ ಎಂದರು.

ಲಾರಿಗೆ ಕಾರು ಡಿಕ್ಕಿಯಾಗಿ ಚಾಲಕ ಸಾವು

ಮುನಿರಾಬಾದ್: ಇಂಡಿಯಾ ರಿಸರ್ವ್ ಬಟಾಲಿಯನ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ವೇಗವಾಗಿ ಬಂದ ಕಾರು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾದ ಘಟನೆ ಸೋಮವಾರ ನಡೆದಿದೆ.
ತಮಿಳುನಾಡು ಮೂಲದ ಕಾರು ಚಾಲಕ ನಿಜಾಮುದ್ದೀನ್ ನಸರುದ್ದೀನ್ (31) ಮೃತ. ಶಬೀಲ್, ಇಮ್ರಾಜ್, ನಜೀರ್ ಅಹಮ್ಮದ್ ಎಂಬುವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಹೆದ್ದಾರಿಯ ರೋಡ್‌ಬ್ರೆಕ್ ಹತ್ತಿರ ನಿಧಾನವಾಗಿ ಚಲಿಸುತ್ತಿದ್ದ ಸರಕು ಸಾಗಣೆ ಲಾರಿಗೆ ವೇಗದಿಂದ ಬಂದ ಕಾರು ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ ಅರ್ಧ ಭಾಗ ಲಾರಿಯ ಒಳಗೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಎಲ್ಲರೂ ತಮಿಳುನಾಡಿನ ಅಂಬೂರ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.