ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಬೋಧಕರ ಸಾಮರ್ಥ್ಯ ಅಭಿವೃದ್ಧಿ ಕಮ್ಮಟದಲ್ಲಿ ಕಾಲೇಜು ಪ್ರವೇಶಾತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ, ಪ್ರಾಂಶುಪಾಲ ಪ್ರೊ.ಸುಂಕೇಶ್ವರಿ ಕರಿಗೂಳಿ, ಭೂದಾನಿ ಚಿಲಕೂರಿ ರಾಮಕೃಷ್ಣ, ಆಹ್ವಾನಿತರಾದ ಪ್ರೊ.ಹೊನ್ನೂರ ಅಲಿ, ಡಾ.ಕೆ.ಸಿ.ಕುಲ್ಕರ್ಣಿ, ಡಾ.ರಾಮಕೃಷ್ಣ ಇತರರಿದ್ದರು.
- ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಅಭಿಮತ
ಗಂಗಾವತಿ: ಕಲಿಕೆಯೊಂದಿಗೆ ಬೋಧನಾ ಸಾಮರ್ಥ್ಯ ಹೆಚ್ಚಿಸುವ ಕಮ್ಮಟಗಳು ಕಾಲೇಜು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೋಧಕರ ಸಾಮರ್ಥ್ಯ ಅಭಿವೃದ್ಧಿ ಕಮ್ಮಟದಲ್ಲಿ ಮಾತನಾಡಿ, ಅಧ್ಯಾಪಕರಿಗಾಗಿ ಆಯೋಜಿಸಿರುವ ಕಮ್ಮಟವು ಬೋಧನಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದ್ದು, ಕಾಲೇಜು ಅಭಿವೃದ್ಧಿಗೆ ನಿರಂತರ ಸಹಕಾರ ನೀಡಲಾಗುವುದು ಎಂದರು.
ಆನ್‌ಲೈನ್ ಮೂಲಕ ಕಮ್ಮಟಕ್ಕೆ ಚಾಲನೆ ನೀಡಿದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಜಿ.ಶೋಭಾ ಮಾತನಾಡಿ, ಕತಕ ಬುದ್ಧಿಮತ್ತೆಯ ಯುಗದಲ್ಲಿ ಅಧ್ಯಾಪಕರ ಸರ್ವಾಂಗೀಣ ಭೋಧನಾ ಸಾಮರ್ಥ್ಯ ಹೆಚ್ಚಿಸುವ ಅವಶ್ಯಕತೆ ಇದ್ದು, ಹೊಸ ತಲೆಮಾರಿನ ವಿದ್ಯಾರ್ಥಿಗಳ ನಿರೀಕ್ಷೆಗೆ ಅನುಗುಣ ಬೋಧಿಸಬೇಕಿದೆ ಎಂದರು.
ಪ್ರಾಂಶುಪಾಲ ಪ್ರೊ. ಸುಂಕೇಶ್ವರ ಕರಿಗೂಳಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಅಧ್ಯಾಪಕರ ಪಾತ್ರ ಪ್ರಮುಖ. ನಿರಂತರ ಅಧ್ಯಯನ ಹಾಗೂ ತರಬೇತಿಗಳನ್ನು ಪಡೆದುಕೊಂಡಲ್ಲಿ ಮಾತ್ರ ಹೊಸತನ ಸಾಧಿಸಲು ಸಾಧ್ಯ ಎಂದರು.
ಕಾಲೇಜು ಪ್ರವೇಶಾತಿ ಅಭಿಯಾನಕ್ಕೆ ರಾಜ್ಯ ಗುಣಮಟ್ಟ ಭರವಸೆ ಕೋಶದ ನೋಡಲ್ ಅಧಿಕಾರಿ ಡಾ.ವಿಕ್ರಂ ಚಾಲನೆ ನೀಡಿದರು. ಭೂದಾನಿ ಚಿಲುಕೂರಿ ವೆಂಕಟರಾಮಕಷ್ಣ, ಪ್ರಾಧ್ಯಾಪಕ ಡಾ.ಸರ್ರಾಜ್, ಆಹ್ವಾನಿತರಾದ ಪ್ರೊ.ಹೊನ್ನೂರ ಅಲಿ, ಡಾ.ಕೆ.ಸಿ.ಕುಲ್ಕರ್ಣಿ, ಡಾ.ರಾಮಕೃಷ್ಣ, ಡಾ.ರಾಬರ್ಟ್ ಜೋಸ್, ಸಂಪನ್ಮೂಲ ವ್ಯಕ್ತಿ ಕೆ.ಎಸ್.ಹರಿ ಇತರರಿದ್ದರು.
ಸಮಾರೋಪದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಮಾತನಾಡಿದರು. ಆನ್‌ಲೈನ್ ತರಬೇತಿ ಕಮ್ಮಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಅಧ್ಯಾಪಕರು ಭಾಗಿಯಾಗಿದ್ದರು.