ಗಂಗಾವತಿಯ ಎಸ್‌ಬಿಐ ಶಾಖೆ ಮುಂದೆ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ತಾಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿನಿಧಿಗಳಾದ ಸ್ವಾಮಿರಾವ್ ಹೇರೂರು, ಬಸನಗೌಡ, ಲಕ್ಷ್ಮಣರಾವ್ ಬೆಳ್ಳುಬ್ಬಿ ಇತರರಿದ್ದರು. 
ಕೊಪ್ಪಳ

ವಾರಕ್ಕೆ ಐದು ಕರ್ತವ್ಯ ದಿನಗಳಿರಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಮುಷ್ಕರ
  • ಗಂಗಾವತಿ ಎಸ್‌ಬಿಐ ಶಾಖೆ ಮುಂದೆ ಪ್ರತಿಭಟನೆ
ಗಂಗಾವತಿ: ವಾರಕ್ಕೆ ಐದು ದಿನ ಕರ್ತವ್ಯ ಅವಧಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ತಾಲೂಕು ಘಟಕದ ಸದಸ್ಯರು ನಗರದ ಎಸ್‌ಬಿಐ ಶಾಖೆ ಮುಂದೆ ಪ್ರತಿಭಟನೆ ನಡೆಸಿದರು.
ಕೆಲಸ ಸ್ಥಗಿತಗೊಳಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ, ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ಖಂಡನೀಯ. ಬ್ಯಾಂಕ್‌ಗಳಲ್ಲಿ ವಾರದ ಐದು ದಿನ ಕರ್ತವ್ಯ ಅವಧಿ ಜಾರಿಗೊಳಿಸಬೇಕು. ತಾರತಮ್ಯದಿಂದ ಕೂಡಿರುವ ಪಿಎಲ್‌ಐ ಯೋಜನೆ ಹಿಂಪಡೆಯಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬ್ಯಾಂಕ್ ಯೂನಿಯನ್‌ಗಳೊಂದಿಗೆ ಚರ್ಚಿಸಬೇಕು. ಈ ಹಿಂದೆ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳು ಮತ್ತು ಒಪ್ಪಂದಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು. ವಿವಿಧ ಬ್ಯಾಂಕ್ ಪ್ರತಿನಿಧಿಗಳಾದ ಬಸನಗೌಡ, ಸ್ವಾಮಿರಾವ್ ಹೇರೂರು, ಲಕ್ಷ್ಮಣರಾವ್ ಬೆಳ್ಳುಬ್ಬಿ, ಸುಧೀಂದ್ರ ಜೋಶಿ, ವಿಶ್ವನಾಥ, ಲಕ್ಷ್ಮೀನಾರಾಯಣ, ಶ್ರೀಕಾಂತ, ಪದ್ಮಶ್ರೀ ಕೊರ್ಲಹಳ್ಳಿ, ಸುರೇಶ ಇತರರಿದ್ದರು.
ಪರದಾಟ: ಬ್ಯಾಂಕ್ ಮುಷ್ಕರದಿಂದ ಗ್ರಾಹಕರು ಪರದಾಡುವಂತಾಯಿತು. ಪಿಂಚಣಿದಾರರು ಮತ್ತು ಸಾಮಾಜಿಕ ಭದ್ರತೆ ಯೋಜನೆ ಗ್ರಾಹಕರು ತೊಂದರೆ ಅನುಭವಿಸಿದರು. ಶುಕ್ರವಾರ ಮುಷ್ಕರ, ಎರಡನೇ ಶನಿವಾರ, ಭಾನುವಾರ ಮತ್ತು ಗಣೇಶ ಹಬ್ಬದ ರಜೆ ಸೇರಿ ನಾಲ್ಕು ದಿನ ವಹಿವಾಟು ಸ್ಥಗಿತವಾಗಲಿದ್ದು, ಗ್ರಾಹಕರು ಎಟಿಎಂಗಳಿಗೆ ಮುಗಿಬಿದ್ದಿದ್ದರು. ಅಲ್ಲಿಯೂ ಹಣ ಖಾಲಿಯಾಗಿದ್ದು, ಬಹುತೇಕ ಎಟಿಎಂಗಳನ್ನು ಸರ್ವರ್ ಡೌನ್ ಮಾಡಲಾಗಿದೆ.