ಯಲಬುರ್ಗಾದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ ಬಿರಾದಾರ ಉದ್ಘಾಟಿಸಿದರು. ಗ್ರಾಹಕರ ಪರಿಹಾರ ಆಯೋಗದ ಸದಸ್ಯ ರಾಜು ಮೇತ್ರಿ, ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಅಪರ ಸರ್ಕಾರಿ ವಕೀಲ್ ಮಲ್ಲನಗೌಡ ಪಾಟೀಲ, ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನ ಶಾಸ್ತ್ರಿಮಠ ಇತರರಿದ್ದರು. 
ಕೊಪ್ಪಳ

ವಸ್ತು ಖರೀದಿಸಿ ರಸೀದಿ ಪಡೆಯಿರಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಯಲಬುರ್ಗಾ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
  • ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ ಬಿರಾದಾರ ಸಲಹೆ
ಯಲಬುರ್ಗಾ: ಆನ್‌ಲೈನ್ ವ್ಯಾಪಾರದಿಂದ ವಂಚನೆ ಪ್ರಕರಣಗಳು ಹೆಚ್ಚಿದ್ದು, ಗ್ರಾಹಕರು ಜಾಗ್ರತೆಯಿಂದ ವ್ಯವಹರಿಸಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ ಬಿರಾದಾರ ಹೇಳಿದರು.
ಪಟ್ಟಣದ ಕಂದಾಯ ಭವನದಲ್ಲಿ ತಾಲೂಕಾಡಳಿತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಮೊಬೈಲ್ಗಳೆ ಗ್ರಾಹಕರ ಸಾಧನಗಳಾಗಿವೆ. ದಿನವೂ ಆನ್‌ಲೈನ್ ಬುಕ್ ಮಾಡಿ ಅನೇಕರು ಭಾರಿ ಮೊತ್ತದ ಹಣ ಕಳೆದುಕೊಂಡಿದ್ದಾರೆ. ‘ಡಿಜಿಟಲ್ ನ್ಯಾಯದ ಮುಖಾಂತರ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಕಾರ್ಯಕ್ರಮದ ಮೂಲಕ ಗ್ರಾಹಕರ ರಕ್ಷಣಾ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಒಂದು ವಸ್ತುವನ್ನು ಖರೀದಿಸಿದಾಗ ರಸೀದಿ ಪಡೆಯಬೇಕು. ಇದರಿಂದ ತೆರಿಗೆ ಪಾವತಿಯಾಗಲಿದೆ. ಇದು ನಾವು ದೇಶಕ್ಕೆ ಮಾಡುವ ಕರ್ತವ್ಯ ಹಾಗೂ ಅಳಿಲು ಸೇವೆ ಎಂದು ಅಭಿಪ್ರಾಯಪಟ್ಟರು.
ಚಲನಚಿತ್ರ ಮಂಡಳಿ ನಿರ್ದೇಶಕಿ ಸಾವಿತ್ರಿ ಮುಜುಂದಾರ ಉಪನ್ಯಾಸ ನೀಡಿ ಮಾತನಾಡಿ, ಆಧುನಿಕ ಯುಗದಲ್ಲಿ ಡಿಜಿಟಲ್ ವ್ಯವಹಾರದಲ್ಲಿ ಮೋಸ ಹೋಗುವವರೇ ಹೆಚ್ಚು. ಸುಳ್ಳು ಜಾಹೀರಾತು ನಂಬಿ ಮೋಸ ಹೋಗಬೇಡಿ. ಸುಳ್ಳು ಜಾಹೀರಾತು ನೀಡಿದ ಸೆಲೆಬ್ರಿಟಿಗಳ ವಿರುದ್ಧವೂ ಕ್ರಮಗಳಾಗಿವೆ. ಯಾವುದೇ ವಸ್ತು ಖರೀದಿಸಿದರೂ ನಾವು ಗ್ರಾಹಕರಾಗುತ್ತೇವೆ. ಆದರೆ, ಸರಕು ಮತ್ತು ಸೇವೆಗೆ ರಸೀದಿ ತೆಗೆದುಕೊಂಡಾಗ ಮಾತ್ರ ನಾವು ಕಾನೂನುಬದ್ಧ ಗ್ರಾಹಕರಾಗುತ್ತೇವೆ. ಅಂತಹವರಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಜೆ.ಇ.ಸೌಭಾಗ್ಯಲಕ್ಷ್ಮೀ ಮಾತನಾಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನೊಂದ ಗ್ರಾಹಕರು ಒಂದು ಲಕ್ಷ ರೂ.ನಿಂದ 50 ಲಕ್ಷ ರೂ.ವರೆಗೂ, ರಾಜ್ಯ ಗ್ರಾಹಕರ ಆಯೋಗದಲ್ಲಿ 50 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೆ, ರಾಷ್ಟ್ರೀಯ ಗ್ರಾಹಕರ ಆಯೋಗದಲ್ಲಿ ಎರಡು ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಪರಿಹಾರ ಪಡೆದುಕೊಳ್ಳಬಹುದು ಎಂದರು.