ಹನುಮಸಾಗರ ಸಮೀಪದ ಕ್ಯಾದಿಗುಪ್ಪ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು. 
ಕೊಪ್ಪಳ

ಬಸ್‌ಗಳ ಸಂಚಾರ ತಡೆದು ಆಕ್ರೋಶ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ
ಹನುಮಸಾಗರ: ಕಾಲೇಜು ಸಮಯಕ್ಕೆ ಬಸ್ ಬಾರದಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸಮೀಪದ ಕ್ಯಾದಿಗುಪ್ಪ ಗ್ರಾಮದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಕುಷ್ಟಗಿ ಹಾಗೂ ಇಲಕಲ್‌ಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುತ್ತೇವೆ. ಆದರೆ, ಕಾಲೇಜು ಸಮಯಕ್ಕೆ ತೆರಳಲು ಗ್ರಾಮಕ್ಕೆ ಬಸ್ ಬರುತ್ತಿಲ್ಲ. ಬಂದ ಬಸ್ಸುಗಳಲ್ಲಿ ನಿಲ್ಲಲು ಜಾಗ ಸಹ ಇರುವುದಿಲ್ಲ. ಗ್ರಾಮದಲ್ಲೇ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಷ್ಟಗಿ ಹಾಗೂ ಇಲಕಲ್ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತಿದ್ದರೂ ನಿಲ್ಲಿಸುತ್ತಿಲ್ಲ. ಇದರಿಂದ ಹೆದ್ದಾರಿಯಲ್ಲೇ ಬಸ್‌ಗಾಗಿ ಕಾದು ನಿಲ್ಲುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದ ವಿದ್ಯಾರ್ಥಿಗಳು, ಕುಷ್ಟಗಿ ಘಟಕದ ಮೂರು ಬಸ್ಸುಗಳನ್ನು ತಡೆದು ಅವುಗಳ ಮೇಲೆ ಮತ್ತು ಮುಂಭಾಗದಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ವಿಜಯ ಎಸ್. ಲಿಂಗದಾಳ ಹಾಗೂ ಪರಶುರಾಮ ಬಸ್ಸುಗಳನ್ನು ಬಿಡುವಂತೆ ಮನವಿ ಮಾಡಿದರೂ ಜಗ್ಗದ ವಿದ್ಯಾರ್ಥಿಗಳು, ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದರು. ಕೊನೆಗೆ ಬಸ್ ಮೂಲಕವೇ ಕರೆದೊಯ್ದು ಡಿಪೋ ವ್ಯವಸ್ಥಾಪಕರನ್ನು ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಹೋರಾಟ ಕೈಬಿಟ್ಟು ಒಲ್ಲದ ಮನಸ್ಸಿನಿಂದ ಬಸ್ ಏರಿದರು.
"

ಕಾಲೇಜು ಸಮಯಕ್ಕೆ ಇನ್ನೊಂದು ಬಸ್ ವ್ಯವಸ್ಥೆ ಮಾಡುವ ಬಗ್ಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳನ್ನು ನಿಲ್ಲಿಸುವ ಕುರಿತು ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.

— ಶಿವಶಂಕರಗೌಡ ಪಾಟೀಲ ಡಿಪೋ ವ್ಯವಸ್ಥಾಪಕ ಕುಷ್ಟಗಿ