ಹುಲಿಗಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕೊರತೆಯಿಂದ ಪ್ರಯಾಣಿಕರು ನಡುರಸ್ತೆಯಲ್ಲಿ ಬಸ್ ಹತ್ತಲು ಮುಗಿಬಿದ್ದಿರುವುದು.
- ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ತೊಂದರೆ
- ನಡುರಸ್ತೆಯಲ್ಲೇ ನಿಲ್ಲುವ ಪ್ರಯಾಣಿಕರು
- ಜೀವ ಕೈಯಲ್ಲಿ ಹಿಡಿದು ಬಸ್ ಹತ್ತುವ ದುಸ್ಥಿತಿ
ಮುನಿರಾಬಾದ್: ಸಮೀಪದ ಸುಕ್ಷೇತ್ರ ಹುಲಿಗಿಯಲ್ಲಿ ಬಸ್ ನಿಲ್ದಾಣ ಇಲ್ಲದಿರುವುದು ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಬರುವ ರಾಜ್ಯದ ನಾನಾ ಜಿಲ್ಲೆಗಳ ಲಕ್ಷಾಂತರ ಭಕ್ತರಿಗೆ ತೊಂದರೆಯಾಗಿದೆ.
ಉತ್ತರ ಕರ್ನಾಟಕ ಶಕ್ತಿ ಪೀಠಗಳಲ್ಲಿ ಒಂದಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಕ್ಷೇತ್ರಕ್ಕೆ ಬರುವ ಮಹಿಳಾ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಬಸ್ ನಿಲ್ದಾಣ ಕೊರತೆಯಿಂದ ಪ್ರಯಾಣಿಕರು ನಡುರಸ್ತೆಯಲ್ಲಿ ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ. ಬಸ್ ಬಂದಾಗ ಜೀವ ಕೈಯಲ್ಲಿ ಹಿಡಿದು ಓಡಿ ಹತ್ತುವ ದುಸ್ಥಿತಿ ಒದಗಿದೆ.
ಹುಲಿಗಿಯಲ್ಲಿ ಬಸ್ ನಿಲ್ದಾಣವಿಲ್ಲದ ಕಾರಣ ಗ್ರಾಮ ಹೊರವಲಯದ ಜಮೀನಿನಲ್ಲಿ ಬಸ್ ನಿಲ್ಲಿಸಿರುವುದು.
ಗಂಗಾವತಿ ಹಾಗೂ ಕೊಪ್ಪಳದಿಂದ ಬರುವ ಬಸ್‌ಗಳು ಹುಲಿಗಿಯ ರೈಲು ನಿಲ್ದಾಣದ ಹತ್ತಿರ, ಹುಣ್ಣಿಮೆ ದಿನಗಳಲ್ಲಿ ಹುಲಿಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲುತ್ತವೆ. ಹೊಸಪೇಟೆಯಿಂದ ಬರುವ ಬಸ್‌ಗಳು ಕೋರಮಂಡಲ್ ಕಂಪನಿ ಮುಂದಿನ ಕ್ರೀಡಾಂಗಣದಲ್ಲಿ ನಿಲ್ಲುತ್ತವೆ. ಇದರಿಂದ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರು 3 ಕಿ.ಮೀ ನೆಡೆದುಬಂದು ದೇವಿ ದರ್ಶನ ಮಾಡಬೇಕಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾದ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಭಕ್ತರು ಹಾಗೂ ಸ್ಥಳೀಯರು ಆಗ್ರಹವಾಗಿದೆ.
ಈಗಾಗಲೇ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅಗತ್ಯ ಭೂಮಿ ಖರೀದಿ ಪ್ರಕ್ರಿಯೆ ನಡೆದಿದೆ. ಅಲ್ಲದೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿದೆ.
ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಿಸಬೇಕು.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಸಿದ್ಧ ಕ್ಷೇತ್ರವಾಗಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಕೂಡಲೇ ಸ್ಥಳೀಯ ಆಡಳಿತ ಹುಲಿಗಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು.