ಬೇವೂರಿನಲ್ಲಿ ಬಸ್ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು.
- ಕಾಲೇಜು ವಿದ್ಯಾರ್ಥಿಗಳ ಪರದಾಟ
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಬಸ್ ಕೊರತೆಯಿಂದ ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇವೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿದಿನ ಕೊಪ್ಪಳದಲ್ಲಿನ ಕಾಲೇಜಯಗಳಿಗೆ ತೆರಳಲು ಬೇವೂರಿನ ಬಸ್ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.
ಹಿಂದೆ ಬೆಳಗ್ಗೆ 7.30ಕ್ಕೆ ಕೊಪ್ಪಳ ಡಿಪೋದಿಂದ ಬರುವ ಬಸ್ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿತ್ತು. ಆದರೆ ಕಳೆದ ಆರು ತಿಂಗಳಿಂದ ಆ ಬಸ್ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವು ಕಾಲೇಜುಗಳು ಬೆಳಗ್ಗೆ 8 ಗಂಟೆಗೆ ಆರಂಭವಾಗುವುದರಿಂದ ವಿದ್ಯಾರ್ಥಿಗಳು ದಿನವೂ ಪರದಾಡುತ್ತಿದ್ದಾರೆ.
ವಿಶೇಷವಾಗಿ ಹೆಣ್ಣು ವಿದ್ಯಾರ್ಥಿಗಳು ಬಸ್ಗಾಗಿ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದು, ಅವರ ಸುರಕ್ಷತೆಗೂ ಆತಂಕ ಉಂಟಾಗಿದೆ. ಈ ಕುರಿತು ಕೊಪ್ಪಳ ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಯಲಬುರ್ಗಾ ಅಥವಾ ಕುಷ್ಟಗಿ ಡಿಪೋಗೆ ಕೇಳಿ ಎಂದು ಸ್ಪಷ್ಟ ಉತ್ತರ ನೀಡದೆ ತಳ್ಳಿಹಾಕುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ.
ಬೇವೂರಿಗೆ ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳ ಮೂರು ಡಿಪೋಗಳಿಂದ ಬಸ್ಗಳು ಸಂಚರಿಸುತ್ತಿದ್ದರೂ, ಯಾವುದೇ ಡಿಪೋ ಸ್ಪಷ್ಟ ಹೊಣೆ ಹೊತ್ತು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಪರಸ್ಪರ ಹೊಣೆ ತಪ್ಪಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಸಂಕಷ್ಟ ಹೆಚ್ಚುತ್ತಿದೆ. ತಕ್ಷಣ ಕ್ರಮ ಕೈಗೊಂಡು ಬೆಳಗ್ಗೆ ಕಾಲೇಜು ವೇಳೆಗೆ ಕನಿಷ್ಠ ಒಂದು ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಬೇವೂರಿಗೆ ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳ ಮೂರು ಡಿಪೋಗಳಿಂದ ಬಸ್ಗಳು ಸಂಚರಿಸುತ್ತಿದ್ದರೂ, ಯಾವುದೇ ಡಿಪೋ ಸ್ಪಷ್ಟ ಹೊಣೆ ಹೊತ್ತು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಪರಸ್ಪರ ಹೊಣೆ ತಪ್ಪಿಸಿಕೊಳ್ಳುತ್ತಿರುವುದರಿಂದ ನಮಗೆ ಸಂಕಷ್ಟ ಹೆಚ್ಚುತ್ತಿದೆ. ಕೊಪ್ಪಳ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿದರೆ ಅವರು ನಮ್ಮ ಮೇಲೆ ಜೋರು ಮಾಡುತ್ತಾರೆ. ನೀವು ಯಲಬುರ್ಗಾ ಮತ್ತು ಕುಷ್ಟಗಿ ಡಿಪೋ ವ್ಯವಸ್ಥಾಪಕರನ್ನು ಕೇಳಿ ನನ್ನನಲ್ಲ ಎನ್ನುತ್ತಾರೆ.
ನಮ್ಮ ಊರು ಗುನ್ನಾಳ ನಾನು ಬೆಳಗ್ಗೆ ಬೇಗನೆ ಊರಿಂದ ಬಂದು ಬೇವೂರಿನಲ್ಲಿ ಬಸ್ಸಿಗಾಗಿ ಕಾಯುತ್ತೇನೆ. ಕುಷ್ಟಗಿಯಿಂದ ಕೊಪ್ಪಳಕ್ಕೆ ಬರುವ ತಡೆರಹಿತ ಬಸ್ಗಳು ಬೇವೂರಿನಲ್ಲಿ ನಿಲ್ಲುವುದಿಲ್ಲ. ಕನಿಷ್ಠ ಬೆಳಗಿನ ಸಮಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಅವುಗಳನ್ನು ನಿಲ್ಲಿಸಿ ಹತ್ತಿಸಿಕೊಳ್ಳುವ ವ್ಯವಸ್ಥೆ ಮಾಡಿದರೆ ಬಹಳ ಅನುಕೂಲವಾಗುತ್ತದೆ.