ಸಕಾಲಕ್ಕೆ ಬಸ್ ಬಿಡಲು ಆಗ್ರಹಿಸಿ ಕನಕಗಿರಿಯ ಪೊಲೀಸ್ ಠಾಣೆಗೆ ತೆರಳಿ ಪಿಐ ವಿ.ನಾರಾಯಣ ಮುಂದೆ ಸಮಸ್ಯೆ ತೋಡಿಕೊಂಡ ವಿದ್ಯಾರ್ಥಿಗಳು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಮಹಾಂತೇಶ, ಮಂಜುನಾಥ, ಹನುಮೇಶ ಇತರರಿದ್ದರು.
- ಪೊಲೀಸ್ ಇನ್ಸ್‌ಪೆಕ್ಟರ್ ಮುಂದೆ ವಿದ್ಯಾರ್ಥಿಗಳ ಅಳಲು
- ಕನಕಗಿರಿ ವಿದ್ಯಾರ್ಥಿಗಳು ಎಸ್‌ಎಫ್‌ಐ ದಿಢೀರ್ ಪ್ರತಿಭಟನೆ
ಕನಕಗಿರಿ: ಬಸರಿಹಾಳ, ಗೌರಿಪುರ, ದೇವಲಾಪುರ ಹಾಗೂ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜು ಸಮಯಕ್ಕೆ ಬಸ್ ಇಲ್ಲದ್ದರಿಂದ ಎಸ್‌ಎಫ್‌ಐ ಸಂಘಟನೆಯೊಂದಿಗೆ ಪಟ್ಟಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ಅಳಲು ತೋಡಿಕೊಂಡರು.
ತಾಲೂಕಲ್ಲದೇ ನೆರೆಯ ಯಲಬುರ್ಗಾ ತಾಲೂಕಿನ ಗಾಣದಾಳ, ಹೊನಗಡ್ಡಿ ಗ್ರಾಮದ ಮಕ್ಕಳು ಸಹ ಶಾಲಾ-ಕಾಲೇಜಿಗಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ, ಸಕಾಲಕ್ಕೆ ಬಸ್ ಇಲ್ಲ. ಬೆಳಗ್ಗೆ ಮಾತ್ರ ಬಸ್ ಇದ್ದು, ನಂತರ ಬರುವುದಿಲ್ಲ. ಇದರಿಂದ ನಿತ್ಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಚಾರ ನಿಯಂತ್ರಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಅವರು ನಿಂದಿಸುತ್ತಾರೆ ಎಂದು ಪಿಐ ವಿ.ನಾರಾಯಣ ಮುಂದೆ ವಿದ್ಯಾರ್ಥಿಗಳು ಅಲವತ್ತುಕೊಂಡರು. ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿದ ಪಿಐ, ಇದು ದೈನಂದಿನ ಸಮಸ್ಯೆಯಾಗಿದ್ದು, ಮಕ್ಕಳು ಬರಿಗಾಲಲ್ಲಿ ನಡೆದುಕೊಂಡು ಬಂದಿರುವುದನ್ನು ಹಲವು ಬಾರಿ ಕಂಡಿದ್ದೇನೆ. ಅದಕ್ಕಾಗಿ ಶಾಲಾ-ಕಾಲೇಜು ಸಮಯಕ್ಕೆ ಬಸ್ ಬಿಡಬೇಕು. ಮಕ್ಕಳೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಲು ನಿಯಂತ್ರಕರಿಗೆ ತಿಳಿಸಿ ಎಂದರು. ಸಕಾಲಕ್ಕೆ ಬಸ್ ಬಿಡುವ ಭರವಸೆ ಸಿಕ್ಕ ಬಳಿಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಮಹಾಂತೇಶ, ಮಂಜುನಾಥ, ಹನುಮೇಶ, ಮೀನಾಕ್ಷಿ, ಶ್ರೀದೇವಿ, ಪಾರ್ವತಿ, ಹನುಮೇಶ, ಬಸವರಾಜ ಇತರರಿದ್ದರು.