ಕುಷ್ಟಗಿಯ ಹೈದರಲಿ ಕಮಿಟಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ಯುವಕರು.
- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಎಲ್.ಬಯ್ಯಪುರ ಅಭಿಪ್ರಾಯ
- ಕುಷ್ಟಗಿ ಮುಹಮ್ಮದ್ ಪೈಗಂಬರ್ ಜನ್ಮದಿನ
ಕುಷ್ಟಗಿ: ಅಪಘಾತದಲ್ಲಿ ಗಾಯಗೊಂಡು ರಕ್ತಸ್ರಾವಗೊಂಡವರಿಗೆ ರಕ್ತದಾನ ಮಾಡುವುದು ಜೀವದಾನ ಮಾಡಿದಷ್ಟೇ ಪುಣ್ಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಎಲ್.ಬಯ್ಯಪುರ ಅಭಿಪ್ರಾಯಪಟ್ಟರು.
ತೆಗ್ಗಿನ ಓಣಿಯ ಹಜರತ್ ಹೈದರಲಿ ಕಮಿಟಿ ಹಾಗೂ ಗಂಗಾವತಿಯ ಗೋಪಿ ಚಾರಿಟಬಲ್ ಸಹಯೋಗದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ತ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಪ್ರವಾದಿ ಪೈಗಂಬರ್ ಅವರ ಜೀವನ ಅತ್ಯಂತ ಕಷ್ಟಕರವಾಗಿತ್ತು. ಅನೇಕ ನೋವುಗಳನ್ನು ಸಹಿಸಿ ಮಾನವ ಜನಾಂಗಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೆಕು ಎಂದರು.
ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಹೈದರಲಿ ಕಮಿಟಿಯ ಯುವಕರು ಪ್ರತಿವರ್ಷ ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ. ಯುವಕರ ಪರಿಶ್ರಮ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ರಕ್ತದಾನ ಮಾಡಿ ದಾಖಲೆ ನಿರ್ಮಿಸಬೇಕು ಎಂದರು.
ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ, ಪುರಸಭೆ ಮಾಜಿ ಸದಸ್ಯ ಉಮೇಶ ಮಂಗಳೂರು, ಮೈನುದ್ದೀನ್ ಮುಲ್ಲಾ ಮಾತನಾಡಿದರು. ಶಿಬಿರದಲ್ಲಿ 180ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಪ್ರಮುಖರಾದ ಮುರ್ತುಜಾ ಪೇಂಟರ್, ಅಹ್ಮದ ಹುಸೇನ್ ಆದೋನಿ, ೈರೋಜ್, ಕಮಿಟಿಯ ಗೌರವಾಧ್ಯಕ್ಷ ಹುಸೇನ್ ಆರ್.ಕಾಯಿಗಡ್ಡಿ, ಅಧ್ಯಕ್ಷ ರಾಜೇಸಾಬ ಮಾಟಲದಿನ್ನಿ ಇತರರಿದ್ದರು.