ಹಿರೇಜಂತಕಲ್‌ನಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ನೀಡಿದ್ದ ಪರವಾನಗಿಯನ್ನು ತಾತ್ಕಾಲಿಕವಾಗಿ ಹಿಂಪಡೆದು ನಗರಸಭೆ ನೀಡಿರುವ ನೋಟಿಸ್.
- ಕಾಮಗಾರಿಗೆ ಸ್ಥಳೀಯರಿಂದ ಆಕ್ಷೇಪ
- ಸಂಬಂಧಿಸಿದ ಕಂಪನಿಗೆ ನಗರಸಭೆಯಿಂದ ನೋಟಿಸ್
ಗಂಗಾವತಿ: ಹಿರೇಜಂತಕಲ್ ಬೈಪಾಸ್‌ನ ವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೊಬೈಲ್ ಟವರ್ ಪರವಾನಗಿಯನ್ನು ನಗರಸಭೆ ತಾತ್ಕಾಲಿಕವಾಗಿ ಹಿಂಪಡೆದಿದ್ದು, ಸಂಬಂಧಿಸಿದ ಕಂಪನಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
24ನೇ ವಾರ್ಡ್ ಹಿರೇಜಂತಕಲ್ ಬೈಪಾಸ್ ರಸ್ತೆಯಲ್ಲಿ ಸುಮಿತ್ರಾ ಎಂಬುವರ ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿದ್ದು, ಸ್ಥಳೀಯರು ಆಕ್ಷೇಪಿಸಿದ್ದಾರೆ. ಜತೆಗೆ ಟವರ್ ನಿರ್ಮಾಣ ಮಾಡದಂತೆ ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿ ಸಲ್ಲಿಸಿದ್ದರು. ನಿರ್ಮಾಣ ಸ್ಥಗಿತಗೊಳಿಸದಿದ್ದರೆ ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದ್ದರಿಂದ ಟವರ್ ನಿರ್ಮಾಣಕ್ಕೆ ನೀಡಿದ ಪರವಾನಗಿಯನ್ನು ತಾತ್ಕಾಲಿಕ ಹಿಂಪಡೆದಿರುವ ನಗರಸಭೆ, ಸ್ಥಳೀಯ ನಿವಾಸಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ನೋಟಿಸ್‌ನಲ್ಲಿ ತಿಳಿಸಿದೆ.
ಟವರ್‌ನಿಂದ ಸಮೀಪದಲ್ಲಿರುವ ಶಾಲೆ, ವೃದ್ಧಾಶ್ರಮ, ಪ್ರಾರ್ಥನಾ ಮಂದಿರ ಸೇರಿ ಇತರ ಕೇಂದ್ರಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಲಾಗಿದೆ. ಮನೆ ನಿರ್ಮಿಸಿಕೊಳ್ಳುವ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದ ನಿವೇಶನದ ಮಾಲಕಿ ಸುಮಿತ್ರಾ ಎಂಬುವರಿಗೂ ನೋಟಿಸ್ ಜಾರಿ ಮಾಡಿದ್ದು, ಟವರ್‌ನಿಂದ ಏರಿಯಾದ ನಿವೇಶನ ಮತ್ತು ಕಟ್ಟಡಗಳ ಮೌಲ್ಯ ಕಡಿಮೆಯಾಗುವ ಬಗ್ಗೆ ತಿಳಿಸಲಾಗಿದೆ.
ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ಸ್ಥಳೀಯರ ಆಕ್ಷೇಪಣೆ ಪರಿಗಣಿಲಾಗಿದ್ದು, ಟವರ್ ಕಂಪನಿಗೆ ನೋಟಿಸ್ ಜಾರಿ ಮಾಡಲಾಗುವುದು. ಜತೆಗೆ ಪರವಾನಗಿ ತಾತ್ಕಾಲಿಕ ಹಿಂಪಡೆಯಲಾಗಿದೆ ಎಂದರು.