- ಸಚಿವ ಶರಣಪ್ರಕಾಶ ಪಾಟೀಲ್ ಆರೋಪ
ಕೊಪ್ಪಳ : ಘಜ್ನಿ ಮಹಮದ್, ಘೋರಿ ಮಹಮದ್ ಸೋಮನಾಥ ದೇವಾಲಯ ಲೂಟಿ ಮಾಡಿದರು. ನಾವು ಹಿಂದುತ್ವ ರಕ್ಷಕರು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಗರು ರಾಮ ಮಂದಿರ ಲೂಟಿ ಮಾಡಿದ್ದಾರೆ. ದಾಳಿಕೋರರಿಗೂ ಇವರಿಗೂ ವ್ಯತ್ಯಾಸವಿಲ್ಲ. ಇವರು ಹಿಂದುತ್ವದ ಮುಖವಾಡ ಧರಿಸಿದ ಖದೀಮರು ಎಂದು ಸಚಿವ ಶರಣಪ್ರಕಾಶ ಪಾಟೀಲ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುತ್ವ ಆಧಾರದಲ್ಲೇ ಬಿಜೆಪಿ ಅಧಿಕಾರಕ್ಕೆಬಂದಿದೆ. ಅವರಲ್ಲೇ ಸಾಕಷ್ಟು ಗೊಂದಲಗಳಿವೆ. ಅನರ್ಹರ ಪತ್ತೆಗಾಗಿ ಗ್ಯಾರಂಟಿ ಪರಿಷ್ಕರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ. ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಹಾಳಾಗಿಲ್ಲ. ಬೇರೆ ರಾಜ್ಯಗಳಿಗಿಂತ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.
ಸಂಘಪರಿವಾರ ಬಗ್ಗೆ ಪ್ರತಿಕ್ರಿಯಿಸಿ, ಸಂಘ ಯಾವತ್ತೂ ಸಂವಿಧಾನ ಒಪ್ಪಿಕೊಂಡಿಲ್ಲ. ಅವರ ನಡವಳಿ ಸರಿಯಾಗಿಲ್ಲ. ಅವರನ್ನು ನಂಬಲಾಗದು. ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಗೃಹ ಸಚಿವರು ತಿಳಿಸಿದ್ದು ಸರಿಯಾಗಿದೆ ಎಂದರು.
ಕೊಪ್ಪಳ ಕಿಮ್ಸ್ ಆಸ್ಪತ್ರೆ ಸ್ಥಳಾಂತರ ಆಗಲಿದೆ. ಖಾಲಿ ಹುದ್ದೆ ಭರ್ತಿಗೆ ಸೂಚಿಸಿರುವೆ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುನಿರಾಬಾದ್ ನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗುವುದು. ತೋಟಗಾರಿಕೆ ಇಲಾಖೆಯ 10 ಎಕರೆ ಜಾಗ ಪಡೆವ ಬಗ್ಗೆ ಮಾತನಾಡಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಹಂತ ಹಂತವಾಗಿ ಆರೋಗ್ಯ ರಂಗ ಸೇವೆ ಸುಧಾರಿಸುವುದಾಗಿ ಭರವಸೆ ನೀಡಿದರು.