ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ನಾಲೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು. ಶಾಸಕ ಜನಾರ್ದನರೆಡ್ಡಿ, ವಿಪ ಸದಸ್ಯರಾದ ಹೇಮಲತಾ ನಾಯಕ, ಎನ್.ರವಿಕುಮಾರ್, ಮಾಜಿ ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಚಿವ ಹಾಲಪ್ಪ ಆಚಾರ್ ಇತರರಿದ್ದರು.
- ಮಾಜಿ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ
- ಮುನಿರಾಬಾದ್ ನಲ್ಲಿ ಬಿಜೆಪಿ ಹೋರಾಟ
ಕೊಪ್ಪಳ: ವಿಜಯನಗರ ಎಡದಂಡೆ ಕಾಲುವೆಗೆ ನೀರು ಹರಿಸಿ ನಮ್ಮನ್ನು ಬದುಕಿಸಬೇಕು. ಇಷ್ಟೇ ನಮ್ಮ ಬೇಡಿಕೆ. ವಿಜಯನಗರ ಕಾಲುವೆಗೆ ವಿಜಯನಗರ ಕಾಲದಿಂದ ನೀರು ಹರಿದಿದೆ. ಇವತ್ತು ಯಾಕೆ ನೀವು ಕೊಡುತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದರು.
ತಾಲೂಕಿನ ಮುನಿರಾಬಾದ್ ನೀರಾವರಿ ಕಚೇರಿ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.
ರೈತ ನಿತ್ಯ ಸತ್ತು ಬದುಕುತ್ತಿದ್ದಾನೆ. ಡ್ಯಾಂನಲ್ಲಿ ನೀರಿಲ್ಲದಾಗ ಕೇಳುತ್ತಿಲ್ಲ. ಸಾಕಷ್ಟು ನೀರಿದೆ. ಆದರೂ ಯಾಕೆ ಬಿಡುತ್ತಿಲ್ಲ. ರೈತ ತನ್ನ ಬದುಕಿಗಾಗಿ ನೀರು ಕೇಳುತ್ತಿಲ್ಲ. ದೇಶದ ಜನರ ಹೊಟ್ಟೆ ತುಂಬಿಸಲು ಕೇಳುತ್ತಿದ್ದಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎರಡು ಬೆಳೆ ಕಳೆದುಕೊಂಡಿದ್ದೇವೆ. ಈಗ ಮೂರನೇ ಬೆಳೆಗೂ ನೀರಿಲ್ಲದಂತಾಗುತ್ತಿದೆ. ಜಲಾಶಯದ ಗೇಟ್ ಸಕಾಲಕ್ಕೆ ಬದಲಾವಣೆ ಮಾಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಎರಡು ವರ್ಷ ಬೇಕಾಯ್ತು ಬದಲಾವಣೆ ಮಾಡಲು. ಕಣ್ಣೆದುರೇ ಜಮೀನು ಒಣಗುತ್ತಿವೆ. ಜನ ಕಣ್ಣೀರು ಹಾಕಿ ಗುಳೆ ಹೋಗುತ್ತಿದ್ದಾರೆ. ಇದು ನಮ್ಮ ತಪ್ಪಾ ? ರಾಜ್ಯ ಸರ್ಕಾರ ಮಾಡಿದ ತಪ್ಪಿನಿಂದ ನಾವು ಕಷ್ಟ ಅನುಭವಿಸುವಂತಾಗಿದೆ. ಇದುವರೆಗೆ ಆಳಿದ ಸರ್ಕಾರಗಳು ವಿಜಯನಗರ ಕಾಲುವೆಗಳಿಗೆ ನೀರು ಕೊಟ್ಟಿವೆ. ಸಿಎಂಗೆ ರೈತರ ಕಷ್ಟ ಗೊತ್ತಿಲ್ಲ. ಖಾಲಿ ಜಾಗ ಇದ್ದಲ್ಲಿ ಬೇಲಿ ಹಾಕೋದು ಮಾತ್ರ ಗೊತ್ತು. ಹೋರಾಟ ಮಾಡುವ ರೈತರನ್ನು ಪೊಲೀಸರ ಮೂಲಕ ಒಕ್ಕಲೆಬ್ಬಿಸುವುದು ಗೊತ್ತು. ಅವರು ಹೋರಾಟದಿಂದ ಸಿಎಂ ಆದವರಲ್ಲ. ದುಡ್ಡುಕೊಟ್ಟು ಸಿಎಂ ಆಗಿದ್ದಾರೆ. ಎಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತದೆಂದು ಅವರಿಗೆ ಗೊತ್ತಿಲ್ಲ. ವಾರದಿಂದ ದೆಹಲಿಯಲ್ಲಿ ಶಬರಿಯಂತೆ ಕಾಯುತ್ತಿದ್ದಾರೆ. ರಾಹುಲ್ ಗಾಂಧಿ ರಾಮನಾಗಲು, ಡಿಕೆಶಿ ಶಬರಿ ಆಗಲು ಸಾಧ್ಯವಿಲ್ಲವೆಂದು ಕಿಡಿಕಾರಿದರು.
ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಇದೊಂದು ಸಾಂಕೇತಿಕ ಹೋರಾಟ. ಇಷ್ಟಕ್ಕೆ ನೀವು ಎಚ್ಚರಗೊಳ್ಳಿ. ಸಿಎಂ ನೀರು ಬಿಡಗಡೆ ನಿರ್ಧಾರ ಕೈಗೊಳ್ಳಬೇಕು. ರಾಘವೇಂದ್ರ ಹಿಟ್ನಾಳ ರೈತರ ದಿಕ್ಕು ತಪ್ಪಿಸುವ ವಿಡಿಯೋ ಮಾಡಿದ್ದು ಸರಿಯಲ್ಲ. ಗಾಬರಿಯಾಗಿ ಮಾತನಾಡಿದ್ದಾರೆ. ಸುಳ್ಳು ಹೇಳಿದ್ದಕ್ಕೆ ತಡಬರಿಸಿದ್ದಾರೆ. ತುಂಗಭದ್ರಾ ನೀರಿನ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ನಡೆದಾಡುವ ದೇವರು ಗವಿಶ್ರೀ ಬೀದಿಗಿಳಿದು ಬಲ್ಡೋಟಾ ಬೇಡ ಎಂದರು. ಆದರೆ ಅದೇ ಕಂಪನಿಯಲ್ಲಿ ಗುತ್ತಿಗೆ ಕೆಲಸ ಮಾಡುವವರು ನೀವು. ಹೋರಾಟವನ್ನು ನೀವು ಅಷ್ಟು ಸುಲಭಕ್ಕೆ ತೆಗೆದುಕೊಳ್ಳಬೇಡಿ. ಕೆಲ ದಿನಗಳಲ್ಲಿ ಟಿಬಿ ಡ್ಯಾಂಗೆ ಅಪಾರ ನೀರು ಹರಿದು ಬರುವ ವಿಶ್ವಾಸವಿದೆ. ಜಲಸಂಪನ್ಮೂಲ ಖಾತೆ ರಾಮಲಿಂಗಾರೆಡ್ಡಿಗೆ ಇಷ್ಟವಿಲ್ಲ. ಉಸ್ತುವಾರಿ ಹೊತ್ತ ಶರಣಪ್ರಕಾಶ ಪಾಟೀಲ್ ಕಣ್ಣೆತ್ತಿ ನೋಡಿಲ್ಲ. ಕೂಡಲೇ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನೀರು ಬಿಡದೇ ನಾವು ಇಲ್ಲಿಂದ ಕದಲುವುದಿಲ್ಲ. ನಾಲ್ಕು ಜಿಲ್ಲೆ ರೈತರು ಒಟ್ಟಾದರೆ ರಾಜ್ಯದ ಪೊಲೀಸರೆಲ್ಲ ಬಂದರೂ ತಡೆಯಲು ಆಗದು ಎಂದು ಎಚ್ಚರಿಸಿದರು.
ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಶಿವರಾಮೇಗೌಡ, ಪ್ರಮುಖರಾದ ನವೀನ್ ಗುಳಗಣ್ಣವರ, ತಿಪ್ಪೇರುದ್ರಸ್ವಾಮಿ, ವಿರುಪಾಕ್ಷಪ್ಪ ಸಿಂಗನಾಳ, ಗಿರೇಗೌಡ, ರಾಜು ನಾಯಕ, ವಿ.ಎಂ.ಭೂಸನೂರಮಠ, ಶರಣು ತಳ್ಳಿಕೇರಿ, ಎ.ವಿ.ಕಣವಿ, ವೀರೇಶ ಸಜ್ಜನ ಇತರರಿದ್ದರು.