ಕನಕಗಿರಿಯಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಸವರಾಜ ದಡೇಸುಗೂರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಬಿಲ್ಗಾರ, ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಶರಶ್ಚಂದ್ರ ನಾಯಕ, ಕನಕಪ್ಪ ಛಲವಾದಿ, ನಾಗರಾಜ ಬಾವಿಕಟ್ಟಿ, ಮಹಾಂತೇಶ ಸಜ್ಜನ್ ಇತರರಿದ್ದರು. 
ಕೊಪ್ಪಳ

ಎಕರೆಗೆ 50 ಸಾವಿರ ರೂ. ಪರಿಹಾರ ಒದಗಿಸಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಯಿಂದ ಕನಕಗಿರಿಯಲ್ಲಿ ಪ್ರತಿಭಟನೆ
  • ಸರ್ಕಾರದ ವಿರುದ್ಧ ಆಕ್ರೋಶ
ಕನಕಗಿರಿ: ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಮಂಡಲ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಬಸವರಾಜ ದಡೇಸುಗೂರು ಮಾತನಾಡಿ, ರಾಜ್ಯದ ಸುಮಾರು 180 ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆಗಳು ಒಣಗಲಾರಂಭಿಸಿದ್ದು, ರೈತರು ಜೀವನ ನಡೆಸುವುದೆ ಕಷ್ಟವಾಗಿದೆ. ಈ ಹಿಂದೆ ತುಂಗಭದ್ರಾ ಜಲಾಶಯದಲ್ಲಿ ಮುಂಗಾರು ಅವಧಿಯಲ್ಲಿ 27 ಹಾಗೂ 37 ಟಿಎಂಸಿ ನೀರು ಇದ್ದಾಗ ಎರಡು ಬಾರಿ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲಾಗಿತ್ತು. ಆದರೆ, ಇದೀಗ ಜಲಾಶಯದಲ್ಲಿ 32 ಟಿಎಂಸಿ ನೀರು ಇದ್ದರೂ 75 ಟಿಎಂಸಿ ನೀರು ಸಂಗ್ರಹವಾಗುವವರೆಗೆ ನೀರು ಹರಿಸುವುದಿಲ್ಲ ಎಂದು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಬಿಲ್ಗಾರ ಮಾತನಾಡಿ, ಕ್ಷೇತ್ರದಲ್ಲಿ ಮಳೆಯಿಲ್ಲದೆ ಬೆಳೆ ಇಲ್ಲದ ಕಾರಣ ಜನರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಆದರೆ, ಕ್ಷೇತ್ರದ ಶಾಸಕರು ಜನರ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿರುವ ಶಾಸಕರು ಇದುವರೆಗೆ 100 ಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿಲ್ಲ. ರೈಸ್ ಟೆಕ್ ಪಾರ್ಕ್ ದುಶ್ಚಟಗಳಿಗೆ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮಂಡಲ ಕಚೇರಿಯಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಹಸೀಲ್ದಾರ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಕಾರ್ಯದರ್ಶಿ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಉಪಾಧ್ಯಕ್ಷ ಕನಕಪ್ಪ ಯಾದವ್, ಪಪಂ ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ಸಿದ್ರಾಮಗೌಡ ಉಪ್ಪಳ, ಅಯ್ಯನಗೌಡ, ಹನುಮಂತರೆಡ್ಡಿ, ಶಿವಕುಮಾರ ಕೋರಿಶೆಟ್ಟರ, ಹರೀಶ ಬಂಕಾಪುರ, ಬಸವರಾಜ ಕೋರಿ, ಮಂಜುನಾಥ ಯತ್ನಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.
"

ಜನರು ಬರದಿಂದ ನರಳುತ್ತಿರುವುದು ಶಾಸಕ ಶಿವರಾಜ ತಂಗಡಗಿಗೆ ಕಾಣುತ್ತಿಲ್ಲ. ದೆಹಲಿಯಲ್ಲೇ ಸಚಿವ ಸ್ಥಾನಕ್ಕಾಗಿ ತಂಗಡಗಿ, ಹಿಟ್ನಾಳ ನಡುವೆ ಬಿಡ್ ನಡೆದಿದ್ದು, ದೆಹಲಿಯಲ್ಲಿ ಶಾಸಕ ತಂಗಡಗಿಗೆ ಸಚಿವ ಸ್ಥಾನದ ರೇಟ್ ಫಿಕ್ಸೃ್ ಆದರೆ, ಕ್ಷೇತ್ರಕ್ಕೆ ಬರುವ ಡೇಟ್ ಫಿಕ್ಸೃ್ ಆಗುತ್ತದೆ ಎಂದು ಕಾಣಿಸುತ್ತಿದೆ.

— ತಿಪ್ಪೇರುದ್ರಸ್ವಾಮಿ ಮಾಜಿ ಕಾಡಾ ಅಧ್ಯಕ್ಷ