ಗಂಗಾವತಿ ಕನಕದಾಸ ವೃತ್ತದಲ್ಲಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಹೊಸ ಕಚೇರಿಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ, ಹಿರಿಯ ಕಾರ್ಯಕರ್ತ ಇಲ್ಲೂರು ಸತ್ಯನಾರಾಯಣ ಶ್ರೇಷ್ಟಿ ಸೋಮವಾರ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಇತರರಿದ್ದರು. 
ಕೊಪ್ಪಳ

ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಠೇವಣಿ ನಷ್ಟ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದನರೆಡ್ಡಿ ಭವಿಷ್ಯ
  • ಗಂಗಾವತಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟನೆ
ಗಂಗಾವತಿ: ಕಾರ್ಯಕರ್ತರ ಶ್ರಮ ಮತ್ತು ಮುಖಂಡರ ಒಗ್ಗಟ್ಟಿನಿಂದ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಟವಾಗಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಕನಕದಾಸ ವೃತ್ತದಲ್ಲಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಹೊಸ ಕಚೇರಿ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಕಾರ್ಯಕರ್ತರ ಅನುಕೂಲಕ್ಕಾಗಿ ಕಚೇರಿಯಿದ್ದು, ಒಗ್ಗಟ್ಟಿನಿಂದ ಪಕ್ಷ ಸಂಘಟಿಸಲಾಗುವುದು. ರಾಮಾಯಣ, ಮಹಾಭಾರತದ ಶ್ರೇಷ್ಠ ಸಂದೇಶಗಳನ್ನು ಕೇಳಿ ಬೆಳೆದಿದ್ದು, ಕೇಂದ್ರದ ಮಾಜಿ ಸಚಿವೆ ದಿ.ಸುಷ್ಮಾಸ್ವರಾಜ್ ಪ್ರೇರಣೆಯಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದು, ಪಕ್ಷದ ಮುಖಂಡರ ವಿಶ್ವಾಸದೊಂದಿಗೆ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪಕ್ಷಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಗುರಿಯಿದ್ದು, ಆರೆಸ್ಸೆಸ್ ಕಚೇರಿಗೂ ಕಾಯಕಲ್ಪ ನೀಡಲಾಗುವುದು ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಸಾಕಷ್ಟಿದೆ. ಪಕ್ಷ ಸಂಘಟನೆ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಬೇಕಿದೆ ಎಂದರು.
ಪಕ್ಷದ ಹಿರಿಯ ಕಾರ್ಯಕರ್ತ ಇಲ್ಲೂರು ಸತ್ಯನಾರಾಯಣಶ್ರೇಷ್ಟಿ ಮೂಲಕ ಕಚೇರಿ ಉದ್ಘಾಟಿಸಲಾಯಿತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಪ್ಷಪ್ಪ ಸಿಂಗನಾಳ್, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೀರೂರು, ಗ್ರಾಮೀಣ ಮಂಡಲ ಡಿ.ಕೆ. ಆಗೋಲಿ ಇತರರಿದ್ದರು.
"

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಗ್ಗೂಟ್ಟಿನ ಮಂತ್ರದೊಂದಿಗೆ ಪಕ್ಷ ಸಂಘಟಿಸಬೇಕಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷ ಎಲ್ಲ ಕ್ಷೇತ್ರದಲ್ಲೂ ವಿಜಯ ಸಾಧಿಸಬೇಕಿದೆ.