ಸಚಿವ ಬಿ.ನಾಗೇಂದ್ರ 
ಕೊಪ್ಪಳ

ಬಿಜೆಪಿ ದಲಿತ ವಿರೋಧಿ ಪಕ್ಷ

ಪ್ರಮುಖ ಮುಖ್ಯಾಂಶಗಳು

  • ಸಚಿವ ಬಿ.ನಾಗೇಂದ್ರ ಆರೋಪ
  • ಎಟು ತಿಂದ ಹುಲಿ ಕೆಲಸ ನೋಡಿ

ಕೊಪ್ಪಳ : ಬಿಜೆಪಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗದವರು ಬೆಳೆಯುವುದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿ ವಿರೋಧಿಸುತ್ತಿದೆ. ಹಿಂದಿನಿಂದಲೂ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವ ಬಿಜೆಪಿ, ದಲಿತರನ್ನು ತುಳಿಯುವ ಮನಸ್ಥಿತಿಯಿಂದ ಹೋರಾಟ ನಡೆಸುತ್ತಿದೆ ಎಂದು ಸಚಿವ ಬಿ. ನಾಗೇಂದ್ರ ಆರೋಪಿಸಿದರು.

ಕೊಪ್ಪಳದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರ ರಾಜೀನಾಮೆ ನೀಡದಿದ್ದರೆ ಸದನ ನಡೆಸಲು ಬಿಡುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು. ದಲಿತರು, ಹಿಂದುಳಿದವರು ಬೆಳೆಯುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿರೋಧ ಪಕ್ಷದವರ ಕೆಲಸ. ಅವರು ತಮ್ಮ ಕೆಲಸ ಮಾಡಲಿ, ನಾವು ಅದಕ್ಕೆ ಸಮರ್ಥವಾಗಿ ಉತ್ತರ ನೀಡುತ್ತೇವೆ. ಸಚಿವ ಸಂಪುಟದ ಎಲ್ಲರೂ ಇದಕ್ಕೆ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು.
ನಮ್ಮ ಪಕ್ಷದ ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದು, ಸರ್ವ ಜನಾಂಗವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಮ್ಮ ಕೆಲಸವನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣದ ಕುರಿತು ಮಾತನಾಡಿ, ಪ್ರಕರಣದಲ್ಲಿ ಹೋದ ಹಣವನ್ನು ವಾಪಸ್​ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಣ ಯಾವ ರೀತಿಯಲ್ಲಿ ದುರುಪಯೋಗವಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ನಾನು ಅದರಿಂದ ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ. ಪ್ರಕರಣದಲ್ಲಿ ನಾನು ಆರೋಪಿ, ಅಪರಾಧಿ ಅಥವಾ ತಪ್ಪಿತಸ್ಥನಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದು, ಇದರಿಂದ ಮುಕ್ತವಾಗಿ ಹೊರಬರುವ ನಂಬಿಕೆ ಇದೆ. ರಾಜ್ಯದ ಹೊರಗೆ ತೆರಳುವಾಗಲೂ ಅಗತ್ಯ ಅನುಮತಿ ಪಡೆದುಕೊಂಡೇ ಹೋಗಿದ್ದೇನೆ. ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯವೂ ತಡೆಯಾಜ್ಞೆ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನ ಅದಲು-ಬದಲು ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾವುದೇ ಖಾತೆ ನೀಡಿದರೂ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಹಾದಿಯಲ್ಲಿ ನಡೆಯುತ್ತೇನೆ. ಈ ಬಾರಿ ನಾನು ಏಟು ತಿಂದ ಹುಲಿಯಾಗಿದ್ದೇನೆ. ಯಾವ ರೀತಿ ಕೆಲಸ ಮಾಡುತ್ತೇನೆ ಎಂಬುದನ್ನು ಕಾದು ನೋಡಿ. ನನಗೆ ನೀಡುವ ಖಾತೆಯಲ್ಲಿ ರಾಜ್ಯದ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಅದಲು-ಬದಲು ವಿಚಾರ ಕೇವಲ ಊಹಾಪೋಹವಾಗಿದ್ದು, ಈ ಕುರಿತು ಹೈಕಮಾಂಡ್​ ನಿರ್ಧಾರ ಕೈಗೊಳ್ಳಲಿದೆ ಎಂದರು.