- ಸಂಘಟಿತ ಹೋರಾಟ ತೋರದ ಬಿಜೆಪಿ
- ಕೈ ಪಡೆ ಕಟ್ಟಿಹಾಕುವಲ್ಲಿ ವಿಫಲ
ಜಗತ್ತಿನಲ್ಲಿ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವೆಂಬ ಅಗ್ಗಳಿಕೆಗೆ ಪಾತ್ರವಾಗಿರುವ ಕಮಲ ಪಾಳಯ ಜಿಲ್ಲೆಯಲ್ಲಿ ದಳ ಮುದುರಿಕೊಂಡಂತಿದೆ. ಪ್ರತಿಪಕ್ಷ ಸ್ಥಾನ ಪಡೆದಿದ್ದರೂ ಆಡಳಿತಾರೂಢ ಕೈ ಪಾಳಯವನ್ನು ರಾಜಕೀಯವಾಗಿ ಕಟ್ಟಿಹಾಕುವಲ್ಲಿ ಕನಿಷ್ಠ ಪ್ರಯತ್ನ ತೋರದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸುತ್ತಿದೆ.
ಕಳೆದ ಲೋಕಸಭಾ ಚುನಾವಣೆ ಬಳಿಕ ಹಂತ ಹಂತವಾಗಿ ಕಮಲ ದಳಗಳು ಒಂದೊಂದಾಗಿ ಉದುರುತ್ತಿವೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ಬದಲಾವಣೆ ಯಾವ ಹೊಸ ಗಾಳಿ ಬೀಸಿದಂತಿಲ್ಲ. ಈ ಮೊದಲು ಮಾಜಿ ಸಂಸದ ಸಂಗಣ್ಣ ಕರಡಿ ಬಿಜೆಪಿಯಲ್ಲಿದ್ದಾಗ ಕೊಂಚ ವಿಪಕ್ಷ ಇದೆ ಎಂಬಂತ ವಾತಾವರಣವಿತ್ತು. ಬದಲಾದ ರಾಜಕೀಯದಲ್ಲಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆಗಿನಿಂದ ಈವರೆಗೂ ಕಮಲ ಪಾಳಯಕ್ಕೆ ಸೂಕ್ತ ನಾಯಕತ್ವ ದೊರೆಕಿದಂತೆ ತೋರುತ್ತಿಲ್ಲ. ಕುಷ್ಟಗಿ ಶಾಸಕ ದೊಡ್ಡನಗೌಡ ಜಿಲ್ಲಾಧ್ಯಕ್ಷರ ಅವಧಿ ಮುಗಿದ ಬಳಿಕ ನವೀನ ಗುಳಗಣ್ಣವರ ಅಧ್ಯಕ್ಷರಾದರು. ಕೆಲ ಪ್ರಮುಖ ಹೋರಾಟಗಳು ನಡೆದವು.
ಬದಲಾದ ದಿನಗಳಲ್ಲಿ ಕನಕಗಿರಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಅವರಿಗೆ ಜಿಲ್ಲಾಧ್ಯಕ್ಷಗಿರಿ ಮುಡಿಗೇರಿದೆ. ನಗರ, ಗ್ರಾಮೀಣ ಭಾಗದ ಪದಾಧಿಕಾರಿಗಳ ಬದಲಾವಣೆ ಮಾಡಿದ ಪಟ್ಟಿಯೂ ಬಿಡುಗಡೆಯಾಗಿದೆ. ಆದರೆ, ಕಚೇರಿ ಹಂತದಲ್ಲಿ ಪದಗ್ರಹಣ ಮಾಡಿಕೊಂಡಿದ್ದು ಯಾಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೋರಾಟದ ವಿಷಯಕ್ಕೆ ಬಂದಲ್ಲಿ ಕೇಂದ್ರ, ರಾಜ್ಯ ಮಟ್ಟದಿಂದ ಬರುವ ಸೂಚನೆ ಅನುಸಾರ ಪ್ರತಿಭಟನೆ, ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಕಮಲ ನಾಯಕರು ಸೀಮಿತರಾಗಿದ್ದಾರೆ. ಸರ್ಕಾರ ಮೆಕ್ಕೆಜೋಳ ಬೆಂಬಲ ಬೆಲೆ ಘೋಷಣೆ ಮಾಡಿದ ನಂತರ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದು ಅಷ್ಟೊಂದು ಪರಿಣಾಮ ತೋರಲಿಲ್ಲ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗಂಗಾವತಿ ಹಾಗೂ ಕುಷ್ಟಗಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಷ್ಟಿದ್ದರೂ ಸಂಟಿತ ಹೋರಾಟ ತೋರುತ್ತಿಲ್ಲ. ಯಾವುದೇ ಹೋರಾಟ, ಪತ್ರಿಕಾಗೋಷ್ಠಿ ನಡೆದರೂ ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ ಸೇರಿ ಇನ್ನಿತರ ಕೆಲ ಪದಾಧಿಕಾರಿಗಳನ್ನು ಬಿಟ್ಟರೆ ಉಳಿದವರು ಕಾಣಿಸುವುದು ಅಪರೂಪ ಎನ್ನಬಹುದು.
ಮುಖಭಂಗ
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಇತ್ತೀಚೆಗೆ ಹಿಟ್ನಾಳ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದಾರೆ. ಈ ವೇಳೆ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ತರಾಟೆ ತೆಗೆದುಕೊಂಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಿ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದರು. ಇಷ್ಟೆಲ್ಲ ನಡೆದರೂ ರಾಜ್ಯ ಬಿಜೆಪಿ ಕನಿಷ್ಠ ವಿರೋಧ ತೋರಲಿಲ್ಲ. ಪೊಲೀಸ್ ಇಲಾಖೆಗೆ ಸ್ವಯಂ ದೂರು ದಾಖಲಿಸುವಂತೆ ಮನವಿ ಸಲ್ಲಿಸಿದ್ದೇ ದೊಡ್ಡ ಪ್ರತಿರೋಧ ಎಂಬಂತಾಗಿದೆ. ಜಿಲ್ಲಾಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಾಯಕರು ಅನುಸರಿಸುವ ಜನವಿರೋಧಿ ನೀತಿಗಳನ್ನು ಗಟ್ಟಿಯಾಗಿ ಖಂಡಿಸಿ ಜನಪರವಾಗಿ ನಿಲ್ಲುವ ಇಚ್ಛಾಶಕ್ತಿ ತೋರದೆ ಜನರೆದರು ಕಮಲ ನಾಯಕರು ಮುಖಭಂಗ ಅನುಭವಿಸುವಂತಾಗಿದೆ.
ಸಮನ್ವಯತೆ ಕೊರತೆ
ರಾಜ್ಯಮಟ್ಟದಲ್ಲೇ ಬಿಜೆಪಿ ಗೊಂದಲದ ಗೂಡಾಗಿದ್ದು ಅದರ ಪರಿಣಾಮ ಜಿಲ್ಲಾಮಟ್ಟಕ್ಕೂ ವಿಸ್ತರಿಸಿದಂತಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಮುಖ ಹೋರಾಟಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕುಷ್ಟಗಿ ಶಾಸಕ ದೊಡ್ಡನಗೌಡ, ಮಾಜಿ ಸಚಿವ ಹಾಲಪ್ಪ ಆಚಾರ್ ಭಾಗಿಯಾದರೂ ಮೊದಲಿನಷ್ಟು ಸಕ್ರಿಯರಾಗಿಲ್ಲ. ಉಳಿದಂತೆ ಪಕ್ಷದ ಅಧ್ಯಕ್ಷ ಬಸವರಾಜ ದಢೇಸುಗೂರುಗೆ ಎಲ್ಲ ನಾಯಕರ ಸಾಥ್ ದೊರೆಯುತ್ತಿಲ್ಲ. ಇತರ ಜಿಲ್ಲಾ, ತಾಲೂಕು, ನಗರ ಹಾಗೂ ಗ್ರಾಮೀಣ ಮಂಡಲ ಪದಾಧಿಕಾರಿಗಳು ಯಾರಿದ್ದಾರೆಂದು ನೆನಪಿಸಿಕೊಳ್ಳುವ ಸ್ಥಿತಿ ಪಕ್ಷದಲ್ಲೇ ನಿರ್ಮಾಣವಾಗಿದೆ.
ಪದಾಧಿಕಾರಿಗಳಲ್ಲೂ ಗೊಂದಲ
ಕಳೆದ ಅವಧಿಗೆ ಪದಾಧಿಕಾರಿಗಳ ಆಯ್ಕೆಯಲ್ಲೂ ಸಾಕಷ್ಟು ಗೊಂದಲಗಳಾದವು. ನವೀನ್ ಗುಳಗಣ್ಣವರ ಜಿಲ್ಲಾಧ್ಯಕ್ಷರಾಗಿದ್ದು ಮುಂದುವರೆಸುವಂತೆ ಬೇಡಿಕೆ ಇಟ್ಟಿದ್ದರು. ಚುನಾವಣೆ ಪ್ರಕ್ರಿಯೆ ನಡೆದು ಬಸವರಾಜ ದಢೇಸುಗೂರು ಅಧ್ಯಕ್ಷರಾದರು. ನಂತರ ಪ್ರಧಾನ ಕಾರ್ಯದರ್ಶಿ, ನಗರ, ಗ್ರಾಮೀಣ ಮಂಡಲಗಳಿಗೆ ಪದಾಧಿಕಾರಿಗಳ ನೇಮಕ ಪಟ್ಟಿ ಬಿಡುಗಡೆಯಾಯಿತು. ಕಚೇರಿ ಹಂತದಲ್ಲಿ ಪದಗ್ರಹಣಕ್ಕೆ ನೇಮಕಾತಿ ಸೀಮಿತವಾಗಿದೆ. ರಾಜ್ಯಾಧ್ಯಕ್ಷನ್ನು ಕರೆಸಿ ದೊಡ್ಡ ಕಾರ್ಯಕ್ರಮ ಮಾಡುವುದಾಗಿ ಹೇಳುತ್ತಾ ದಿನದೂಡಲಾಗುತ್ತಿದೆ. ಈ ನಡುವೆ ಮತ್ತೆ ಪದಾಧಿಕಾರಿಗಳ ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಪದಾಧಿಕಾರಿಗಳಲ್ಲಿ ಗೊಂದಲ ಮೂಡಿದ್ದು ಸಕ್ರಿಯವಾಗಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗುತ್ತಿದೆ.
ರಾಜ್ಯಾದ್ಯಂತ ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರವಾಗಿದೆ. ನಾವೂ ಪ್ರತಿ ಜಿಲ್ಲಾ ಹಂತದಲ್ಲೂ ಸರಣಿ ಹೋರಾಟ ರೂಪಿಸುತ್ತೇವೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಕುರ್ಚಿ ತೂರಿದ್ದನ್ನು ನಾನೂ ಸೇರಿ ಎಲ್ಲ ನಾಯಕರು ಖಂಡಿಸಿದ್ದೇವೆ. ಕೊಪ್ಪಳದ ಪದಾಧಿಕಾರಿಗಳೂ ದೂರು ನೀಡಿದ್ದಾರೆ. ಮುಂದೆ ಇನ್ನಷ್ಟು ಸಂಟಿತ ಹೋರಾಟ ಮಾಡುತ್ತೇವೆ.