ಕುಕನೂರು: ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರೋತ್ಸವ ಆ.30ರಿಂದ ಸೆ.1ರವರೆಗೆ ಜರುಗಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
30ರ ಬೆಳಗ್ಗೆ 8 ಗಂಟೆಗೆ ಬಸವ ಮಂಟಪದಲ್ಲಿ ಮೈನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು ಧರ್ಮ ಧ್ವಜಾರೋಹಣ ಹಾಗೂ ಕಲಶಾರೋಹಣ ಕಾರ್ಯಕ್ರಮ ನೆರವೇರಲಿದೆ. ಹಿರೇಮಠದ ಚನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಶಾಂತವೀರಯ್ಯ ಶಾಸ್ತ್ರಿಗಳು ಉಪಸ್ಥಿತರಿರುವರು. ಮಧ್ಯಾಹ್ನ 3 ಗಂಟೆಗೆ ಧರ್ಮಸಭೆ ಹಾಗೂ ಲಘು ರಥೋತ್ಸವ ಜರುಗಲಿದ್ದು, ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸುವರು.
ಆ.31ರಂದು ಸಂಜೆ ಮಹಾ ರುದ್ರಾಭಿಷೇಕ, ಪ್ರಸಾದ ಹಾಗೂ ಮಹಾರಥೋತ್ಸವ ಜರುಗಲಿದೆ. ರಾತ್ರಿ 10 ಗಂಟೆಗೆ ಜಯದೇವ ಮುರುಘರಾಜೇಂದ್ರ ನಾಟ್ಯ ಸಂಘದಿಂದ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.1ರಂದು ಧರ್ಮಸಭೆ ಹಾಗೂ ಎತ್ತಿನ ಮೆರವಣಿಗೆ ಹಾಗೂ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ.
ಬನಹಟ್ಟಿಯ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ ಹಾಗೂ ಶರಣು ಯಮನೂರ ಅವರಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಸುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಾತ್ರೋತ್ಸವದ ಆಯೋಜಕರು ಮನವಿ ಮಾಡಿದ್ದಾರೆ.