ಹಟ್ಟಿ-ಬೆಳಗಟ್ಟಿ ಮಧ್ಯೆ ಇರುವ ಕೆರೆಯು ನೀರಿಲ್ಲದೆ ಭಣಗುಡುತ್ತಿರುವುದು.  k shreekantha
ಕೊಪ್ಪಳ

ಬೆಳಗಟ್ಟಿ-ಹಟ್ಟಿ ಕೆರೆ ಖಾಲಿ ಖಾಲಿ

ಕುರುವತ್ತಿ ಶ್ರೀಕಾಂತಪ್ಪ

ವಿಜಯವಾಣಿ ಸುದ್ದಿಜಾಲ ಅಳವಂಡಿ

ಸಮೀಪದ ಬೆಳಗಟ್ಟಿ ಹಾಗೂ ಹಟ್ಟಿ ಗ್ರಾಮದ ಮಧ್ಯದಲ್ಲಿರುವ ಕೆರೆಯು ನೀರಿಲ್ಲದೆ ಒಣಗಿದ್ದು, ಜನ-ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬೆಳಗಟ್ಟಿ, ಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಹಾಗೂ ಜಾನುವಾರುಗಳು ಈ ಕೆರೆಯನ್ನೇ ಅವಲಂಬಿಸಿವೆ. ಕೆಲ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ

ಗ್ರಾಮಸ್ಥರ ಸಹಕಾರದೊಂದಿಗೆ 16 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗಿತ್ತು. ಆಗ ತುಂಗಭದ್ರಾ ನದಿ ನೀರು ಹರಿಸಲಾಗಿತ್ತು. ಆದರೆ, ಸಮರ್ಪಕವಾಗಿ ನೀರು ಸಂಗ್ರಹವಾಗದ ಕಾರಣ ಕೆರೆ

ಬರಿದಾಗಿದೆ. ದನಕರು, ಕುರಿ-ಮೇಕೆಗಳಿಗೆ ಕುಡಿವ ನೀರು ಒದಗಿಸುವುದು ರೈತರಿಗೆ ಸವಾಲಾಗಿದೆ. ಬೇಸಿಗೆಯಂತೆ ತಾಪಮಾನ ಹೆಚ್ಚಾಗುತ್ತಿದ್ದು, ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕ

ಎದುರಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾದರೆ ಅಂತರ್ಜಲ ಮಟ್ಟ ಹೆಚ್ಚುವುದರ ಜತೆಗೆ ಕೃಷಿ ಚಟುವಟಿಕೆ, ಪ್ರಾಣಿ ಪಕ್ಷಿಗಳಿಗೂ ನೆರವಾಗಲಿದೆ. ಆದ್ದರಿಂದ ತುಂಗಭದ್ರಾ ನದಿಯಿಂದ ನೀರು ಹರಿಸಿ

ಕೆರೆಯನ್ನು ತುಂಬಿಸಬೇಕು. ಈ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಹಟ್ಟಿ-ಬೆಳಗಟ್ಟಿ ಮಧ್ಯೆ ಇರುವ ಕೆರೆಗೆ ನೀರು ಹರಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ರಾಘವೇಂದ್ರ ಹಿಟ್ನಾಳ ಶಾಸಕ, ಕೊಪ್ಪಳ