ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯಡೆಂಘೆ ದಿನ ಕಾರ್ಯಕ್ರಮ ಉದ್ದೇಶಿಸಿ ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಮಾತನಾಡಿದರು. ಉಪನ್ಯಾಸಕರಾದ ಬಸವರಾಜ, ವಿಜಯ ಕುಮಾರ, ರಾಜು, ಡಾ. ಹಂಪಾದೇವಿ, ಆರೋಗ್ಯ ನಿರೀಕ್ಷಣಾಧಿಕಾರಿ ಬಸಪ್ಪ ಗಾಳಿ ಇತರರು ಇದ್ದರು.
- ಆರೋಗ್ಯ
- ನಿರೀಕ್ಷಣಾಧಿಕಾರಿ
- ಸಲಹೆ
ಅಳವಂಡಿ: ಡೆಂಘೆಯಿಂದ ದೂರವಿರಲು ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ತಿಳಿಸಿದರು.
ಗ್ರಾಮದ ಶ್ರೀ ಶಿವಮೂರ್ತಿ ಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನ ಕಾರ್ಯಕ್ರಮ ಉದ್ದೇಶಿಸಿ ಶನಿವಾರ ಮಾತನಾಡಿದರು.
ಡೆಂಘೆ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಇತರರಿಗೆ ಕಚ್ಚಿದಾಗ ಹರಡುತ್ತದೆ. ಮನೆಯಲ್ಲಿ ಯಾರಿಗಾದರೂ ಜ್ವರದ ಲಕ್ಷಣ ಕಂಡು ಬಂದರೆ ರಕ್ತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಈ ರೋಗದ ಬಗ್ಗೆ ಜಾಗೃತಿಯಿಂದ ಇರಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಬಸಪ್ಪ ಗಾಳಿ ಮಾತನಾಡಿ, ಡೆಂಘೆ ವಿಶಿಷ್ಟ ಲಕ್ಷಣಗಳು ಹಠಾತ್ ಜ್ವರ, ತಲೆನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ, ತೀವ್ರವಾದ ಹೊಟ್ಟೆ ನೋವು, ನಿರಂತರ ವಾಂತಿ, ತ್ವರಿತ ಉಸಿರಾಟ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಆಯಾಸ, ವಾಂತಿಯಲ್ಲಿ ರಕ್ತ, ತೀವ್ರ ಬಾಯಾರಿಕೆ ಈ ತರಹದ ಲಕ್ಷಣ ಕಂಡು ಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದರು.
ಉಪನ್ಯಾಸಕ ಜಗದೀಶ ಆಲದಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಡೆಂಘೆ ಜ್ವರದ ಬಗ್ಗೆ ಮನೆಯಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಮನೆಯಲ್ಲಿ ಸಂಗ್ರಹಿಸಿದ ನೀರನ್ನು ವಾರಕ್ಕೊಮ್ಮೆ ಬದಲಾಯಿಸಬೇಕು. ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದರು.