ಹಕ್ಕಿಜ್ವರ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಶುಕ್ರವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಡಿಎಫ್ಒ ನಿರ್ಮಲಾ, ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಡಾ.ಶರಣಬಸಪ್ಪ ರೋಣ, ಡಾ.ಲಕ್ಮಣ ನಾಯ್ಕ, ಡಾ.ಪ್ರಕಾಶ ಚೂರಿ ಇದ್ದರು.  
ಕೊಪ್ಪಳ

ಹಕ್ಕಿ ಜ್ವರ ಬಗ್ಗೆ ಇರಲಿ ಎಚ್ಚರ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ
ಕೊಪ್ಪಳ : ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಶೀತ ಜ್ವರ (ಹಕ್ಕಿ ಜ್ವರ) ಪ್ರಕರಣ ದೃಢಪಟ್ಟಿದೆ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಶುಪಾಲನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೊಪ್ಪಳದಲ್ಲಿ 25 ಮೊಟ್ಟೆ, 14 ಮಾಂಸ ಉತ್ಪಾದನಾ ಕೋಳಿ ಫಾರಂಗಳಿವೆ. ಹಕ್ಕಿಜ್ವರ ಹರಡದಂತೆ ಎಚ್ಚರವಹಿಸಿ. ಪಕ್ಕದ ರಾಜ್ಯದಲ್ಲಿ ರೋಗ ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯಲ್ಲೂ ಕಟ್ಟೆಚ್ಚರವಹಿಸಿ. ಕೋಳಿ ಫಾರಂ ಮಾಲೀಕರು ಈ ಬಗ್ಗೆ ಜಾಗೃತರಾಗಿರಿ. ಕೋಳಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ಪಶು ವೈದ್ಯರಿಗೆ ಮಾಹಿತಿ ನೀಡಿ. ರೋಗಪೀಡಿತ ಕೋಳಿಗಳನ್ನು ಆರೋಗ್ಯವಂತ ಕೋಳಿಗಳಿಂದ ಬೇರ್ಪಡಿಸಿ. ಸತ್ತ ಕೋಳಿಗಳನ್ನು ಸುರತವಾಗಿ ಹೂತು ಹಾಕಿ. ಫಾರಂಗಳು ಜನವಸತಿ ಪ್ರದೇಶದಿಂದ ದೂರ ಇರುವಂತೆ ನೋಡಿಕೊಳ್ಳಿ. ಜನರು ಕೋಳಿ, ಅದರ ಉತ್ಪನ್ನ ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆಯುವಂತೆ ತಿಳಿಸಿದರು.
ಕೋಳಿ ಮಾಂಸ, ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್​ ಉಷ್ಣಾಂಶದಲ್ಲಿ 10 ನಿಮಿಷ ಬೇಯಿಸಬೇಕು. ಜನರು ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮ ಪಾಲಿಸಿ.ಫಾರಂನಲ್ಲಿ ಕೆಲಸ ಮಾಡುವವರಿಗೂ ಅರಿವು ಮೂಡಿಸಿ. ಕೋಳಿ ಅಥವಾ ಇತರ ಪಗಳು ಅಸಹಜವಾಗಿ ಸತ್ತರೆ ಪಶುವೈದ್ಯರಿಗೆ ಮಾಹಿತಿ ನೀಡಿ. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬಂದರೆ ವರದಿ ಮಾಡಿ. ಶಂಕಿತ ಹಕ್ಕಿ ಜ್ವರ ಪ್ರಕರಣವಾಗಿದ್ದಲ್ಲಿ ತಕ್ಷಣ ತಂಡ ನಿಯೋಜಿಸಿ ಪರಿಶೀಲಿಸಿ. ಅವಶ್ಯವಿದ್ದರೆ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುವಂತೆ ನಿರ್ದೇಶಿಸಿದರು.
ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಡಿಎಫ್​ಒ ನಿರ್ಮಲಾ, ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಡಾ.ಶರಣಬಸಪ್ಪ ರೋಣ, ಡಾ.ಲಕ್ಮಣ ನಾಯ್ಕ, ಡಾ. ಪ್ರಕಾಶ ಚೂರಿ ಇತರರಿದ್ದರು.