ಗಂಗಾವತಿ ತಾಲೂಕಿನ ಕಡೇಬಾಗಿಲು ಪ್ರವೇಶ ದ್ವಾರ ಬಳಿಯಿದ್ದ ಬೃಹತ್ ಆಲದ ಮರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.  
ಕೊಪ್ಪಳ

ಹಳೆಯ ಆಲದ ಮರಕ್ಕೆ ಬೆಂಕಿಯಿಂದ ಹಾನಿ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನ ಕಡೇಬಾಗಿಲು ಪ್ರವೇಶ ದ್ವಾರ ಬಳಿಯಿದ್ದ ಬೃಹತ್ ಆಲದ ಮರದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದ ಗಿಡ ಕಂಟೆಗಳು ಗುರುವಾರ ಸುಟ್ಟುಹೋಗಿವೆ.
ಶತಮಾನದ ಇತಿಹಾಸವಿರುವ ಆಲದ ಮರ ಬೃಹದಕಾರದಲ್ಲಿ ಬೆಳೆದಿದ್ದು, ಪಾದಚಾರಿಗಳು ಮತ್ತು ಪ್ರಾಯಾಣಿಕರಿಗೆ ನೆರಳಿನ ಆಶ್ರಯ ತಾಣವಾಗಿತ್ತು. ಕಾಂಡದ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಂಬೆಗಳು ಸುಟ್ಟುಹೋಗಿದ್ದು, ಈ ಬೆಂಕಿ ಸುತ್ತಮುತ್ತ ವ್ಯಾಪಿಸಿದ್ದರಿಂದ ಇತರ ಮರಗಳಿಗೂ ಹಾನಿಯಾಗಿದೆ. ಮರದಲ್ಲಿ ವಾಸಿಸುತ್ತಿದ್ದ ಮರಕುಟಿಕ ಸೇರಿ ಇತರ ಪಕ್ಷಿಗಳಿಗೂ ತೊಂದರೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಆನೆಗೊಂದಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರು ಮರದ ಬಳಿ ಕಾಲುವೆಯಲ್ಲಿ ಜಂಗಲ್ ಕಟ್ಟಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮುಳ್ಳು ಕಂಟೆಗೆ ಬೆಂಕಿ ಹಚ್ಚಿದ್ದರಿಂದ ಮರಕ್ಕೆ ವ್ಯಾಪಿಸಿದೆ ಎನ್ನಲಾಗಿದೆ. ಐತಿಹಾಸಿಕ ಮರ ಉಳಿಸಿಕೊಳ್ಳಲು ಪರಿಸರವಾದಿ ಆನೆಗೊಂದಿಯ ಸಿಂಧು ಎಂಬುವರು ವಾರಕ್ಕೊಮ್ಮೆ ವೀಕ್ಷಿಸುತ್ತಿದ್ದು, ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಬೆಂಕಿ ಕಾಣಿಸಿಕೊಂಡಿದ್ದರಿಂದ ಮರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.