ಕೊಪ್ಪಳದಲ್ಲಿ ಗುರುವಾರ ಮಕ್ಕಳಿಗೆ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಗಿರಪ್ಪ ಇಟಗಿ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ, ಯೋಜನಾಧಿಕಾರಿ ವಿರೂಪಾಕ್ಷಿಗೌಡ ವಿ. ಪಾಟೀಲ, ಅನ್ನಪೂರ್ಣ ಕುಬಕಡ್ಡಿ, ಸಿಡಿಪಿಒ ರೋಹಿಣಿ ಕೊಟಗಾರ್, ಬಾಲ ವಿಕಾಸ ಅಕಾಡೆಮಿ ಸದಸ್ಯರಾದ ಹರ್ಷವರ್ಧನ್ ಇದ್ದರು.
- ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಸಲಹೆ
ಕೊಪ್ಪಳ : ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಮಕ್ಕಳಲ್ಲಿ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ ತಡೆಯಲು 18 ವರ್ಷದೊಳಗಿನ ಮಕ್ಕಳ ಮೊಬೈಲ್ ಬಳಕೆ ನಿಯಂತ್ರಣ ಹೇರುವಂತೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಗಿರಪ್ಪ ಇಟಗಿ ಮನವಿ ಮಾಡಿದರು.
ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಿಗೆ ಭವಿಷ್ಯದ ದಾರಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಪ್ರತಿಭೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಮಾತನಾಡಿ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಮಕ್ಕಳ ಸುರಕ್ಷತೆ, ಮೊಬೈಲ್ ದುರ್ಬಳಕೆ ಹಾಗೂ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಸರ್ಕಾರಿ ಉದ್ಯೋಗದ ಜತೆಗೆ ಖಾಸಗಿ ವಲಯದಲ್ಲಿರುವ ಅವಕಾಶಗಳು ಹಾಗೂ ಸ್ಥಳಿಯ ಸಂಪನ್ಮೂಲ ಆಧಾರಿತ ಸ್ವಯಂ ಉದ್ಯೋಗಗಳ ಕುರಿತು ಮಾರ್ಗದರ್ಶನ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ್ ಕಡಗದ ಮಾತನಾಡಿ, ಮಕ್ಕಳು ಯಾವುದೇ ದುರಭ್ಯಾಸ ಅಥವಾ ವ್ಯಸನಗಳಿಗೆ ಒಳಗಾಗದೆ ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ, ಯೋಜನಾಧಿಕಾರಿ ವಿರೂಪಾಕ್ಷಿಗೌಡ ವಿ. ಪಾಟೀಲ, ಅನ್ನಪೂರ್ಣ ಕುಬಕಡ್ಡಿ, ಸಿಡಿಪಿಒ ರೋಹಿಣಿ ಕೊಟಗಾರ್, ಬಾಲ ವಿಕಾಸ ಅಕಾಡೆಮಿ ಸದಸ್ಯರಾದ ಹರ್ಷವರ್ಧನ್, ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿ ಶ್ರೀದೇವಿ, ಫಾತಿಮಾ, ಶೃತಿ, ಪುನೀತ್, ಪ್ರಮೋದ ಕುಮಾರ ಇತರರಿದ್ದರು.