ಬಕ್ರೀದ್ ಹಬ್ಬ ಅಂಗವಾಗಿ ಕೊಪ್ಪಳ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದರು.
- ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ
- ಪರಸ್ಪರ ಶುಭಾಶಯ ಕೋರಿದ ಗಣ್ಯರು
ಕೊಪ್ಪಳ : ನಗರದ ಈದ್ಗಾ ಮೈದಾನ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ತ್ಯಾಗ&ಬಲಿದಾನದ ಪ್ರತಿಕವಾದ ಪವಿತ್ರ ಬಕ್ರೀದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ಪ್ರಾರ್ಥನೆ ಮೂಲಕ ಅಲ್ಲಾಹುವಿಗೆ ನಮಿಸಲಾಯಿತು.
ಹುಲಿಕೆರೆ ಮೈದಾನ ಹಾಗೂ ಭಾಗ್ಯನಗರ ಸೇರಿ ಇತರೆಡೆ ಸಾಮೂಹಿಕ ಪ್ರಾರ್ಥನೆ ನಡೆದವು. ಪ್ರಾರ್ಥನೆ ಬಳಿಕ ಜನರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ನಗರದ ಪ್ರಮುಖ ವೃತ್ತ ಹಾಗೂ ಮಸೀದಿ ಸೇರಿ ಇತರೆಡೆ ಪೊಲೀಸರು ಕಾವಲಿದ್ದು, ಶಾಂತಿಯಿಂದ ಹಬ್ಬ ಆಚರಣೆಗೆ ಅನುವು ಮಾಡಿಕೊಟ್ಟರು.
ಗಣ್ಯರು ಹಬ್ಬದ ಶುಭಾಶಯ ಕೋರಿದರು. ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ್, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್, ಕೆ.ಎಂ.ಸೈಯ್ಯದ್, ಎಂ.ಕಾಟನ್ ಪಾಷಾ, ಶಿವಕುಮಾರ ಪಾವಲಿಶೆಟ್ಟರ್, ಮಂಜುನಾಥ ಸೊರಟೂರು ಇತರರಿದ್ದರು.