ಗಂಗಾವತಿಯಲ್ಲಿ ಹದಿಹರೆಯದವರ ಆರೋಗ್ಯ ಸಮಸ್ಯೆ ಮತ್ತು ಪರಿಹಾರ ಕುರಿತ ಜಾಗೃತಿ ಕಾರ್ಯಾಗಾರವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲ್ಕುಂದಿ ಬುಧವಾರ ಉದ್ಘಾಟಿಸಿದರು. ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸುರೇಶ ಬಿರಾದಾರ್, ಹಾಸನದ ವೈದ್ಯೆ ಡಾ. ಶಿಫಾಲಿ, ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ್ ಇತರರಿದ್ದರು.
- ವೈದ್ಯ ಡಾ. ಸುರೇಶ ಬಿರಾದಾರ್ ಸಲಹೆ
- ಜಾಗೃತಿ ಕಾರ್ಯಾಗಾರ
ಗಂಗಾವತಿ: ದೈನಂದಿನ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದರ ಒತೆಗೆ ಕ್ರಮಬದ್ಧ ಆಹಾರ ಪದ್ಧತಿ ಅನುಸರಿಸಬೇಕು ಎಂದು ಬೆಂಗಳೂರಿನ ಸೇಂಟ್‌ಒನ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸುರೇಶ ಬಿರಾದಾರ್ ಸಲಹೆ ನೀಡಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಯುವ ರೆಡ್‌ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಸಮಸ್ಯೆ ಮತ್ತು ಪರಿಹಾರ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಯೋಗ, ನಡಿಗೆ ಮತ್ತು ಉತ್ತಮ ಆಹಾರ ಕ್ರಮಗಳನ್ನು ಪಾಲಿಸುವುದರ ಜತೆಗೆ ವೈಯಕ್ತಿಕ ಶುಚಿತ್ವದತ್ತ ಹೆಚ್ಚಿನ ಗಮನಹರಿಸಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಹೊಂದಲು ಸಾಧ್ಯವಿದ್ದು, ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಮುಚ್ಚುಮರೆಯಿಲ್ಲದೆ ತಜ್ಞ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆದು ಬಗೆಹರಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ್ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜೀವನದ ಮುಂದಿನ ಸಕಲ ಸಾಧನೆಗಳಿಗೂ ಉತ್ತಮ ಆರೋಗ್ಯವೇ ಅಡಿಪಾಯವಾಗಲಿದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲ್ಕುಂದಿ ಕಾರ್ಯಾಗಾರ ಉದ್ಘಾಟಿಸಿದರು. ಹಾಸನದ ವೈದ್ಯೆ ಡಾ. ಶಿಫಾಲಿ, ಐಕ್ಯೂಎಸಿ ಸಂಯೋಜಕ ಕೆ.ಎಚ್. ಮಂಜುನಾಥ, ಸಖಿ ಮಹಿಳಾ ಘಟಕದ ಸಂಯೋಜಕಿ ಮೆಹ್ತಾಬ್ ಅಂಜುಂ, ಅತಿಥಿ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಪವನ ಕುಮಾರ ಗುಂಡೂರ, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಅಕ್ಕಿ ಮಾರುತಿ, ಉಪನ್ಯಾಸಕರಾದ ಡಾ. ಬಸವರಾಜ್ ಎಸ್. ಗಡಾದ, ಭೀಮಪ್ಪ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.