ಗಂಗಾವತಿ ನಗರಸಭೆ ಸಭಾಂಗಣದಲ್ಲಿ ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಕಾರ್ಯಕ್ರಮದಲ್ಲಿ ಜೆಎಂಎ್ಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಗುರುವಾರ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ್, ಪೌರಾಯುಕ್ತ ಆರ್. ವಿರೂಪಾಕ್ಷಪ್ಪ ಮೂರ್ತಿ ಇತರರಿದ್ದರು. 
ಕೊಪ್ಪಳ

ಕಾನೂನು ಪಾಲಿಸದವರು ದೇಶದ್ರೋಹಿಗಳು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿಕೆ
  • ಪ್ಲಾಸ್ಟಿಕ್ ನಿಷೇಧ ಕುರಿತ ಅರಿವು ಕಾರ್ಯಕ್ರಮ
ಗಂಗಾವತಿ: ಕಾಯ್ದೆ, ಕಾನೂನು ಪಾಲಿಸದವರು ದೇಶದಲ್ಲಿರಲು ಅನರ್ಹರಾಗಿದ್ದು, ದೇಶದ್ರೋಹಿಗಳು ಎಂದು ಜೆಎಂಎ್ಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಮತ್ತು ಕಾನೂನು ಸೇವೆ ಪ್ರಾಧಿಕಾರದಿಂದ ವ್ಯಾಪಾರಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಕಾಯ್ದೆ ರೂಪಿಸಿದೆ. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾರಣಾಂತಿಕ ಕಾಯಿಲೆಗಳು ಬರುವ ಸಂಭವವಿದೆ. ವ್ಯಾಪಾರಿಗಳು ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಬೇಕಿದ್ದು, ಜನರಲ್ಲೂ ಜಾಗೃತಿ ಮೂಡಿಸಬೇಕು. ಪರಿಸರ ಸ್ನೇಹಿ ಚೀಲಗಳ ಬಳಕೆಗೆ ಆದ್ಯತೆ ನೀಡಬೇಕಿದ್ದು, ಪ್ಲಾಸ್ಟಿಕ್ ಮಾರುವ ಮತ್ತು ಬಳಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶಗಳಿವೆ. ಜೈಲು ಮತ್ತು ದಂಡ ವಿಧಿಸುವ ಕಾಯ್ದೆಯಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಯಾಗಿ ಹಲವು ವರ್ಷಗಳಾದರೂ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಇನ್ನೂಮುಂದೆ ಕಾನೂನು ಕ್ರಮ ಕೈಗೊಳ್ಳಲು ನಗರಸಭೆಗೆ ಸೂಚಿಸಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದರು.
ಪ್ರಕರಣ ದಾಖಲಾದರೆ ವ್ಯಾಪಾರಿಗಳ ಪರ ವಕಾಲತ್ತುವಹಿಸಲ್ಲ ಎಂದು ವಕೀಲರ ಸಂಘ ಕಾರ್ಯಕ್ರಮದಲ್ಲಿ ನಿರ್ಣಯ ತೆಗೆದುಕೊಂಡಿತ್ತು. ಪ್ಲಾಸ್ಟಿಕ್‌ಬಳಸಲ್ಲ, ಮಾರಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ವ್ಯಾಪಾರಿಗಳಿಂದ ಪಡೆಯಲಾಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ್, ಪೌರಾಯುಕ್ತ ಆರ್. ವಿರೂಪಾಕ್ಷಪ್ಪ ಮೂರ್ತಿ, ಪರಿಸರ ಇಂಜಿನಿಯರ್ ಶರಣಪ್ಪ, ನಗರ ಪಿಐ ಪ್ರಕಾಶ ಮಾಳೆ, ವಕೀಲರ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ನಾಯಕ, ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಉಪಾಧ್ಯಕ್ಷ ಪ್ರಕಾಶ ಕುಸುಬಿ ಇತರರಿದ್ದರು. ಆರೋಗ್ಯ ನಿರೀಕ್ಷಕ ಎ.ನಾಗರಾಜ್ ನಿರ್ವಹಿಸಿದರು.
"

ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ವರ್ಷಗಳಿಂದ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದು, ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಲಾಗುವುದು.