ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ಡಾ.ರಾಮಾಂಜನೇಯ ಚಾಲನೆ ನೀಡಿದರು. ಡಾ.ಶರಣಪ್ಪ, ಸಲಹೆಗಾರ್ತಿ ಡಾ.ಜಯಶ್ರೀ ಎಂ.ಎಚ್., ವೈದ್ಯ ಡಾ.ಮಹೇಶ ಉಮಚಗಿ, ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಇದ್ದರು.
- ಡಾ.ಪ್ರಕಾಶ ಎಚ್. ಹೇಳಿಕೆ
- ಕೊಪ್ಪಳದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ
ಕೊಪ್ಪಳ: ಕ್ಯಾನ್ಸರ್ ರೋಗದ ಬಗ್ಗೆ ಎಲ್ಲರೂ ಹೆಚ್ಚರವಹಿಸಬೇಕೆಂದು ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್. ಹೇಳಿದರು.
ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಮಾತನಾಡಿದರು.
ಕ್ಯಾನ್ಸರ್ ರೋಗದ ಬಗ್ಗೆ ಅರಿವು ಹೊಂದಬೇಕು. ಮೂಢನಂಬಿಕೆ ಬಿಡಬೇಕು. ಆರೋಗ್ಯಪೂರ್ಣ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ. ಕ್ಯಾನ್ಸರ್ ಅಸಾಂಕ್ರಾಮಿಕ ರೋಗಗಳಲ್ಲಿ ಒಂದು. ಪುರುಷರಲ್ಲಿ ಬಾಯಿ, ಶ್ವಾಸಕೋಶ, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠ, ಸ್ತನ, ಬಾಯಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹಳ ದಿನಗಳ ಕೆಮ್ಮು, ನೋವಿಲ್ಲದ ಗಡ್ಡೆ, ಊತ ಇವು ಕ್ಯಾನ್ಸರ್ ರೋಗದ ಲಕ್ಷಣ. ಅಂಥವುಗಳ ಬಗ್ಗೆ ರ್ನಿಲಕ್ಷ್ಯ ಮಾಡದೆ ಪರೀಸಿಕೊಳ್ಳಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಮಾತನಾಡಿ, ಜೀವನಶೈಲಿಯಿಂದ ಬರುವ ಅಸಾಂಕ್ರಾಮಿಕ ರೋಗಗಳಲ್ಲಿ ಕ್ಯಾನ್ಸರ್ ಒಂದು. ಮುಂದಿನ ದಿನಗಳಲ್ಲಿ 9-14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್ಪಿವಿ ಲಸಿಕೆ ನೀಡಲಾಗುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳ ಮೂಲಕ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೂಲಕ ಕ್ಯಾನ್ಸರ್ ಹರಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ನಂತರ ಹಳೇ ಜಿಲ್ಲಾ ಆಸ್ಪತ್ರೆ ಆವರಣದಿಂದ ಆರಂಭವಾಗಿ ಕೇಂದ್ರ ಬಸ್ ನಿಲ್ದಾಣ, ಡಾ.ಸಿಂಪಿಲಿಂಗಣ್ಣ ರಸ್ತೆ, ನಗರ ಪೋಲಿಸ್ ಠಾಣೆ, ದಿವಟರ್ ಸರ್ಕಲ್, ಅಶೋಕ್ ವೃತ್ತ ಮಾರ್ಗವಾಗಿ ಜಾಗೃತಿ ಜಾಥಾ ಸಾಗಿತು. ಎನ್ಸಿಡಿ ಕಾರ್ಯಕ್ರಮ ಪಿಜಿಷಿಯನ್ ಡಾ.ಶರಣಪ್ಪ, ಸಲಹೆಗಾರ್ತಿ ಡಾ.ಜಯಶ್ರೀ ಎಂ.ಎಚ್., ವೈದ್ಯ ಡಾ.ಮಹೇಶ ಉಮಚಗಿ, ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಎಲ್.ವಿ. ಸಜ್ಜನರ್ ಇತರರಿದ್ದರು.