ಕನಕಗಿರಿ: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ ಹಮ್ಮಿಕೊಂಡಿರುವ ಲಂಚಮುಕ್ತ ಅಭಿಯಾನ ನಿಮಿತ್ತ ಸೋಮವಾರ ಸರ್ಕಾರಿ ಕಚೇರಿಗಳಿಗೆ ತೆರಳಿ ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆಗಳು ಮತ್ತು ಆಡಳಿತಾತ್ಮಕ ವ್ಯವಸ್ಥೆ ಪರಿಶೀಲನೆ ನಡೆಸಿತು.
ತಹಸಿಲ್ ಕಚೇರಿ, ಪೊಲೀಸ್ ಠಾಣೆ, ಪಪಂ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸರ್ಕಾರಿ ಸೇವೆಗಳ ಕಾರ್ಯವೈಖರಿ, ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆಗಳು ಮತ್ತು ಕಚೇರಿಗಳಲ್ಲಿನ ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಪರಿಶೀಲಿಸಿ ಮಾಹಿತಿ ಪಡೆಯಿತು. ಲಂಚಮುಕ್ತ ಸೇವೆ ಕುರಿತು ಜಾಗೃತಿ ಮೂಡಿಸಿತು.
ಪಕ್ಷದ ಪ್ರಮುಖ ಕೆ. ನಿರುಪಾದಿ ಗೋಮರ್ಸಿ ಮಾತನಾಡಿ, ಸರ್ಕಾರಿ ಕಚೇರಿಗಳು ಜನಸಾಮಾನ್ಯರಿಗೆ ಸುಲಭ, ಪಾರದರ್ಶಕವಾಗಿ ಮತ್ತು ನಿಗದಿತ ಸಮಯದಲ್ಲಿ ಸೇವೆ ಒದಗಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರಿ ಸೇವೆ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಇರಬಾರದು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ, ಅನಗತ್ಯ ವಿಳಂಬ, ಲಂಚದ ಬೇಡಿಕೆಯಂಥ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಸೂಕ್ತ ದಾಖಲೆ ಹಾಗೂ ಮಾಹಿತಿಯೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಅಧಿಕಾರಿಗಳು ಸಹ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ, ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದರು.
ತಾಲೂಕಾಧ್ಯಕ್ಷ ರಾಜೇಶ ಚಿನ್ನೂರು ಮಾತನಾಡಿ, ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕ ಹಾಗೂ ಹೊಣೆಗಾರಿಕೆ ಹೆಚ್ಚಿಸುವುದು, ಸಾರ್ವಜನಿಕರ ಹಕ್ಕುಗಳ ಕುರಿತು ಅರಿವು ಮೂಡಿಸುವುದು. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಎಸ್ಸಿ-ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪಾ.ಯ ಗಣೇಶ್, ರೈತ ಘಟಕದ ಕಾರ್ಯದರ್ಶಿ ಕನಕಪ್ಪ ಉಡೆಜಾಲಿ, ಜಿಲ್ಲಾಧ್ಯಕ್ಷ ಗಣೇಶ ಅಮೃತ್, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮೈನುದ್ದೀನ್, ಶಾಮೀದ್ ಅಲಿ, ತಾಲೂಕು ಉಪಾಧ್ಯಕ್ಷ ಹನುಮಂತಪ್ಪ ವಾಲೇಕಾರ್ ಇತರರಿದ್ದರು.