ಗಂಗಾವತಿ ನಗರಸಭೆ ಆಡಳಿತ ನಿರ್ವಹಣೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿತು. ಡಿವೈಎಸ್ಪಿ ಲೋಕೇಶಕುಮಾರ, ಪಿಐಗಳಾದ ಚಂದ್ರಪ್ಪ, ಶೈಲಜಾ ಪ್ಯಾಟಿ ಇತರರಿದ್ದರು. 
ಕೊಪ್ಪಳ

ಗಂಗಾವತಿ ನಗರಸಭೆಗೆ ಲೋಕಾ ಶಾಕ್

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಆಡಳಿತ ವೈಫಲ್ಯ ಹಿನ್ನೆಲೆಯಲ್ಲಿ ದಾಳಿ
  • 6 ಅಧಿಕಾರಿಗಳನ್ನೊಳಗೊಂಡ ತಂಡದಿಂದ ಕಡತ ಪರಿಶೀಲನೆ
ಗಂಗಾವತಿ: ಇಲ್ಲಿನ ನಗರಸಭೆ ಆಡಳಿತ ನಿರ್ವಹಣೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿತು.
ಲೋಕಾಯುಕ್ತ ಡಿವೈಎಸ್ಪಿ ಲೋಕೇಶಕುಮಾರ ನೇತೃತ್ವದ 6 ಅಧಿಕಾರಿಗಳನ್ನೊಳಗೊಂಡ ತಂಡ ಕಚೇರಿಗೆ ಪ್ರವೇಶಿಸಿದ್ದು, ಎಲ್ಲ ವಿಭಾಗದ ವಿಷಯ ನಿರ್ವಾಹಕರ ಸಮ್ಮುಖದಲ್ಲಿ ಕಡತಗಳನ್ನು ಪರಿಶೀಲಿಸಿತು. ಲೋಕಾಯುಕ್ತ ತಂಡ ಭೇಟಿ ಹಿನ್ನೆಲೆಯಲ್ಲಿ ಕಚೇರಿಗೆ ಸಾರ್ವಜನಿಕರ ಸಂಪರ್ಕಕ್ಕೆ ತಡೆ ನೀಡಿದ್ದು, ವಿಷಯ ನಿರ್ವಾಹಕರ ಬಳಿ ಯಾರನ್ನೂ ಬಿಡಲಿಲ್ಲ. ಇ ಖಾತಾ ಸೇರಿ ಇತರ ಪ್ರಮಾಣಪತ್ರಕ್ಕಾಗಿ ಅಲೆದಾಡುತ್ತಿದ್ದವರನ್ನು ಅಧಿಕಾರಿಗಳ ತಂಡ ವಿಚಾರಿಸಿ ಮಾಹಿತಿ ಪಡೆದುಕೊಂಡಿತ್ತಲ್ಲದೇ ಕೆಲ ಸಮಸ್ಯೆಗಳನ್ನು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಸಮ್ಮುಖದಲ್ಲಿ ಇತ್ಯರ್ಥಗೊಳಿಸಿ ವಿತರಣೆಗೆ ಗಡುವು ನೀಡಿತು.
ಕಂದಾಯ, ನೈರ್ಮಲೀಕರಣ, ಇಂಜಿನಿಯರಿಂಗ್ ವಿಭಾಗದಲ್ಲಿ ಸಿಬ್ಬಂದಿಯನ್ನು ಕೆಲ ಕಡತಗಳ ಬಗ್ಗೆ ವಿಚಾರಣೆ ನಡೆಸಿತ್ತಲ್ಲದೇ, ಲೋಪ ಕಂಡು ಬಂದ ಕಡತಗಳ ಮಾಹಿತಿ ಪಡೆದುಕೊಂಡಿತ್ತು. ವಿಳಂಬ ಧೋರಣೆ, ವಿಲೇವಾರಿ ಲೋಪ ಮತ್ತು ಕಡತಗಳ ಅಸಮರ್ಪಕ ನಿರ್ವಹಣೆ ಬಗ್ಗೆ ತಂಡ ಗರಂ ಆಗಿದ್ದು, ಸಿಬ್ಬಂದಿ ಕಾರ್ಯವೈಖರಿ ಅಧಿಕಾರಿಗಳು ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಡಿವೈಎಸ್ಪಿ ಲೋಕೇಶಕುಮಾರ ಮಾತನಾಡಿ, ನಗರಸಭೆ ಆಡಳಿತ ನಿರ್ವಹಣೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಸರ್ಚ್ ವಾರೆಂಟ್‌ದೊಂದಿಗೆ ಪರಿಶೀಲಿಸಿದ್ದು, ನಿರ್ವಹಣೆ ಲೋಪ ಕಂಡು ಬಂದಿದೆ. ಕೆಲವೊಂದನ್ನು ಸಾರ್ವಜನಿಕರ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಗಿದೆ. ಬಹಳಷ್ಟು ನ್ಯೂನತೆಗಳಿದ್ದು, ಸಮಗ್ರ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಪಿಐಗಳಾದ ಚಂದ್ರಪ್ಪ, ಶೈಲಜಾ ಪ್ಯಾಟಿ ಇತರರಿದ್ದರು. ನಂತರ ತಂಡ ತಾಲೂಕಿನ ಮಲಕನಮರಡಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಕಡತಗಳ ನಿರ್ವಹಣೆಯಲ್ಲಿ ವಿಳಂಬ ಧೋರಣೆ ಮತ್ತು ಲೋಪಗಳ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಮತ್ತು ಮೇಲಧಿಕಾರಿಗಳ ಸೂಚನೆ ಮೇರೆಗೆ ದಾಳಿ ನಡೆಸಿದ್ದು, ಸಮಗ್ರ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.